ಬೆಂಗಳೂರು: ವಿಶ್ವದ ಗಮನ ಸೆಳೆದಿದ್ದ ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸಲು ಯಶಸ್ವಿಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ಹಾಗು ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದಲೇ ವರ್ಚುಯಲ್ ಮೂಲಕ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗನ್ನು ವೀಕ್ಷಿಸಿದರು. ನಂತರ ದೇಶವನ್ನುದ್ದೇಶಿಸಿ ಭಾಷಣ ಮಾಡಿ ಇಸ್ರೋ ತಂಡಕ್ಕೆ ಅಲ್ಲಿಂದಲೇ ಶುಭ ಕೋರಿದ್ದರು. ಇದೀಗ ವಿದೇಶದಿಂದ ವಾಪಸಾಗಲಿರುವ ಮೋದಿ ಈಗ ಖುದ್ದು ಭೇಟಿ ನೀಡಿ ಅಭಿನಂದನೆ ಸಲ್ಲಿಸಲಿದ್ದಾರೆ. ಅದಕ್ಕಾಗಿ ಆಗಸ್ಟ್ 26 ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಹೆಚ್ಎಎಲ್ಗೆ ಆಗಮಿಸಲಿರುವ ಪ್ರಧಾನಿ ಮೋದಿ, 6.30ರವರೆಗೆ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ 6.35ಕ್ಕೆ ರಸ್ತೆ ಮಾರ್ಗದ ಮೂಲಕ ಹೊರಟು, 7 ಗಂಟೆಗೆ ಪೀಣ್ಯದಲ್ಲಿನ ಐ-ಸ್ಟ್ರಾಕ್ ಕೇಂದ್ರಕ್ಕೆ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 7 ಗಂಟೆಯಿಂದ 8ರವರೆಗೆ ಇಸ್ರೋ ವಿಜ್ಞಾನಿಗಳ ಜೊತೆ ಸಭೆ ನಡೆಸಲಿದ್ದಾರೆ. ಬಳಿಕ 8.05ಕ್ಕೆ ಅಲ್ಲಿಂದ ಹೊರಡಲಿರುವ ಪ್ರಧಾನಿ, 08.35ಕ್ಕೆ ಬೆಂಗಳೂರಿನ ಹೆಚ್ಎಎಲ್ನಿಂದ ದೆಹಲಿಗೆ ಹಿಂದಿರುಗಲಿದ್ದಾರೆ.
ಇಸ್ರೋ ಸಂಸ್ಥೆಗೆ ಭೇಟಿ ನೀಡಿ ಅಭಿನಂದಿಸಿದ್ದ ಡಿಕೆಶಿ: ಚಂದ್ರಯಾನ-3 ಯೋಜನೆ ಯಶಸ್ವಿ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಸ್ರೋ ಸಂಸ್ಥೆಗೆ ಬುಧವಾರ ಸಂಜೆ ಭೇಟಿ ನೀಡಿ ಸಂಸ್ಥೆ ಮುಖ್ಯಸ್ಥ ಎಸ್. ಸೋಮನಾಥ್ ಹಾಗೂ ಅವರ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಇಸ್ರೋ ಅಧ್ಯಕ್ಷ ಸೋಮನಾಥ್, ಯು ಆರ್ ರಾವ್ ಬಾಹ್ಯಕಾಶ ಕೇಂದ್ರದ ನಿರ್ದೇಶಕ ಶಂಕರನ್, ಯೋಜನೆ ನಿರ್ದೇಶಕ ವೀರಮುತ್ತು, ಸಹಾಯಕ ಯೋಜನೆ ನಿರ್ದೇಶಕಿ ಕಲ್ಪನಾ, ಯಂತ್ರ ನಿರ್ವಹಣೆ ನಿರ್ದೇಶಕ ಶ್ರೀಕಾಂತ್ ಮತ್ತಿತರ ವಿಜ್ಞಾನಿಗಳನ್ನು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಪುಷ್ಪಮಾಲೆ ಹಾಕಿ ಡಿ.ಕೆ. ಶಿವಕುಮಾರ್ ಅವರು ತುಂಬು ಹೃದಯದಿಂದ ಅಭಿನಂದಿಸಿದರು.
ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ನ್ನು ಯಶಸ್ವಿಯಾಗಿ ಇಳಿಸಿದ ನಿಮ್ಮ ಸಾಧನೆ ಶ್ಲಾಘನೀಯ. ನೀವು ಭಾರತದ ಹೆಮ್ಮೆ ಎಂದು ಡಿಕೆಶಿ ಕೊಂಡಾಡಿದರು. ಚಂದ್ರಯಾನ ಯೋಜನೆ ಬಗ್ಗೆ ಸಂಕ್ಷಿಪ್ತ ವಿವರ ಪಡೆದ ಶಿವಕುಮಾರ್ ಅವರು ವಿಜ್ಞಾನಿಗಳ ಸಾರ್ಥಕ ಸಂತಸದ ಕ್ಷಣಗಳಿಗೆ ಸಾಕ್ಷಿಯಾದರು. ಇಡೀ ದೇಶವೇ ನಿರೀಕ್ಷೆ ಹೊಂದಿದ್ದ ಚಂದ್ರಯಾನ 3 ಯೋಜನೆ ಯಶಸ್ವಿಯಾಗಿರುವ ಈ ಸಂದರ್ಭದಲ್ಲಿ ಯೋಜನೆಗಾಗಿ ಶ್ರಮಿಸಿದ ಇಸ್ರೋ ಸಂಸ್ಥೆಯ ಎಲ್ಲ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳ ಶ್ರಮ ಅವಿಸ್ಮರಣೀಯ ಎಂದರು.
ಡಿಕೆಶಿ ಶುಭ ಸಂದೇಶ: ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಕಾಲಿಟ್ಟಿದೆ. ಆ ಮೂಲಕ ಚಂದ್ರಗ್ರಹದ ಮೇಲೆ ಭಾರತದ ಹೆಗ್ಗುರುತು ಮೂಡಿದೆ. ಇದಕ್ಕಾಗಿ ಅವಿರತ ಶ್ರಮಿಸಿದ ಇಸ್ರೋ ಸಂಸ್ಥೆಗೆ ಶುಭಾಶಯಗಳು. ಇಸ್ರೋ ಸಂಸ್ಥೆ ಚಂದ್ರಯಾನ ಯೋಜನೆ ಯಶಸ್ವಿಗೊಳಿಸಿರುವುದು ದೊಡ್ಡ ಸಾಧನೆಯೇ ಸರಿ. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿರುವುದು ಇಡೀ ದೇಶವೇ ಹೆಮ್ಮೆಪಡುವ ವಿಚಾರ.
ಈ ಯೋಜನೆ ಯಶಸ್ಸಿನ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಎಂದು ಶಿವಕುಮಾರ್ ಅವರು ಕೊಂಡಾಡಿದ್ದಾರೆ. 1960ರ ದಶಕದಲ್ಲೇ ದೇಶದ ರಾಕೆಟ್ ಮ್ಯಾನ್ ವಿಕ್ರಂ ಸಾರಾಭಾಯಿ, ಮಾಜಿ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಅವರ ದೂರದೃಷ್ಟಿ ಇಸ್ರೋ ಸಂಸ್ಥೆಗೆ ಬುನಾದಿ ಹಾಕಿತ್ತು. ಅಂದು ಅವರು ಬಿತ್ತಿದ ಬೀಜ ಇಂದು ವಿಶ್ವದಲ್ಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದಿದೆ" ಎಂದು ಶಿವಕುಮಾರ್ ಅವರು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿನಂದನೆ: ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವ ಮೂಲಕ ಯಶಸ್ವಿಯಾಗಿರುವ ಇಸ್ರೋ ತಂಡಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿನಂದಿಸಿದ್ದಾರೆ. ಸಾಮಜಿಕ ಜಾಲತಾಣ 'x'ನಲ್ಲಿ ಟ್ವೀಟ್ ಮಾಡಿರುವ ಅವರು, "ಭಾರತದ ISRO ಮತ್ತೊಮ್ಮೆ ಸಾಧನೆ ಮಾಡಿದೆ. ಚಂದ್ರಯಾನ 3 ರ ಯಶಸ್ವಿ ಮಿಷನ್ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮತ್ತೊಂದು ಯಶಸನ್ನು ಗುರುತಿಸುತ್ತದೆ..
ಈ ಮಿಷನ್ನ ಯಶಸ್ವಿಯಲ್ಲಿ ಭಾಗಿಯಾದ ಇಸ್ರೋದ ವಿಜ್ಞಾನಿಗಳು ಸೇರಿದಂತೆ ಪ್ರತಿಯೊಬ್ಬರಿಗೂ, ಇಡೀ ತಂಡಕ್ಕೆ ಅವರ ಸಮರ್ಪಣೆ ಮತ್ತು ನಾವೀನ್ಯತೆಗಾಗಿ ಅಭಿನಂದನೆಗಳು!" ಎಂದಿದ್ದಾರೆ. ಅಲ್ಲದೆ, ವಿಶ್ವದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಎಲ್ಲರಿಗೂ ನನ್ನ ಹೃದಯ ಪೂರ್ವಕ ನಮನಗಳು. ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿನಂದನೆ: ಚಂದ್ರಯಾನ-3ರ ಯಶಸ್ಸಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಅದ್ಭುತ ಯಶಸ್ಸಿಗೆ ಭಗೀರಥ ಪ್ರಯತ್ನ ಮಾಡಿದ ಬಾಹ್ಯಾಕಾಶ ವಿಜ್ಞಾನಿಗಳೆಲ್ಲರನ್ನೂ ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಇದೊಂದು ವಿಶ್ವದಾಖಲೆಯಾಗಿದ್ದು, ಭಾರತದ ಕೀರ್ತಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಹೆಚ್ಚಾಗಿದೆ. ಎಲ್ಲರಿಗೂ ಉಜ್ವಲ ಭವಿಷ್ಯವನ್ನು ಹಾರೈಸುತ್ತ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂದೆ ಇನ್ನೂ ಹೆಚ್ಚಿನ ಸೇವೆ - ಸಾಧನೆ ಮಾಡಿ ಯಶಸ್ಸನ್ನು ಪಡೆಯುವಂತೆ ಶ್ರೀ ಮಂಜುನಾಥ ಸ್ವಾಮಿ ಹಾಗೂ ಧರ್ಮದೇವತೆಗಳು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆಂದು ಅವರು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವ!