ಬೆಂಗಳೂರು : ರಾಜಧಾನಿ ಹೊರತುಪಡಿಸಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ವ್ಯಾಪ್ತಿಯಲ್ಲಿ 24×7 ಕುಡಿಯುವ ನೀರು ಪೂರೈಸುವ ದಾಹಮುಕ್ತ ಕರ್ನಾಟಕ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಸಾಧ್ಯತೆಗಳಿವೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ದಾಹಮುಕ್ತ ಕರ್ನಾಟಕ ಯೋಜನೆಯ ಮೂಲಕ ಕರ್ನಾಟಕದ ಪ್ರತಿಯೊಬ್ಬ ಪ್ರಜೆಗೂ ಕುಡಿಯುವ ನೀರು ಲಭ್ಯವಾಗಲಿದೆ. 7,620 ಕೋಟಿ ರೂ.ಗಳ ಈ ಯೋಜನೆಯಿಂದ ನಗರ ಪ್ರದೇಶಗಳ ದಾಹ ಇಂಗಲಿದೆ, ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಹಳ್ಳಿಗಾಡಿನ ದಾಹ ತೀರಲಿದೆ. ಇನ್ನೆರಡು ತಿಂಗಳಲ್ಲಿ ಯೋಜನೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಅಮೃತ್ 2 ಅಡಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನವೆಂಬರ್ 11ರಂದು ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಅಂದೇ ಅಮೃತ್ - 2 ಅಡಿಯಲ್ಲಿ ಕರ್ನಾಟಕವನ್ನು ದಾಹ ಮುಕ್ತಗೊಳಿಸುವ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಬೇಕೆಂದು ಮನವಿ ಮಾಡಲಾಗಿದೆ. ಈಗಿರುವ ಮಾಹಿತಿಗಳ ಪ್ರಕಾರ ಪ್ರಧಾನಿಗಳು ಈ ಯೋಜನೆಗೆ ಚಾಲನೆ ನೀಡಲು ಒಪ್ಪಿಗೆ ನೀಡಿದ್ದು, ಅಂತಿಮ ಕಾರ್ಯಕ್ರಮಗಳ ಪಟ್ಟಿ ಸಿದ್ಧಗೊಂಡ ನಂತರ ಅದು ಖಚಿತಗೊಳ್ಳಲಿದೆ ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರಿನ ನೀರು ಮಾರ್ಗದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ತಡೆಗೆ ಅಗತ್ಯ ಕ್ರಮ ಎಂದ ಡಿಸಿ
ನದಿ ಮೂಲಗಳಿಂದ ಎಲ್ಲಾ ನಗರ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ರೂಪುರೇಷೆ ಸಿದ್ಧಗೊಂಡಿದ್ದು, ತ್ವರಿತವಾಗಿ ಜಾರಿಗೆ ಬರಲಿದೆ. ಆ ಮೂಲಕ ಕರ್ನಾಟಕದ ದಾಹ ಇಂಗಲಿದೆ. ಯೋಜನೆಗೆ ಕೇಂದ್ರ ಸರ್ಕಾರ ಶೇ.50 ಧನ ಸಹಾಯ ಮಾಡಲಿದ್ದು, ಉಳಿದ ಶೇ.50 ರಷ್ಟು ಪಾಲನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಯೋಜನೆಗೆ ಚಾಲನೆ ಸಿಕ್ಕ ಕೂಡಲೇ ಜಾರಿಗೆ ವಿಳಂಬವಾಗದಂತೆ ನೋಡಿಕೊಳ್ಳಲಾಗುವುದು. ಈಗಾಗಲೇ ಪೂರ್ವಭಾವಿ ಸಿದ್ಧತೆ ಗಳು ನಡೆದಿದ್ದು, ಮಹತ್ವಾಕಾಂಕ್ಷೆಯ ಈ ಯೋಜನೆ ಜಾರಿಗೊಂಡರೆ ಜನರ ಕನಸು ನನಸಾಗಲಿದೆ ಎಂದರು.
ಇದನ್ನೂ ಓದಿ: ಅತಿ ಹೆಚ್ಚು ನೀರು ಹರಿದು ಬಂದಿದ್ದರಿಂದ ಈ ಅವಘಡ ಸಂಭವಿಸಿದೆ: ಶ್ರೀರಾಮುಲು