ಬೆಂಗಳೂರು: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ಹೈಕಮಾಂಡ್ ನಿರ್ದೇಶನ ಪಾಲಿಸುವ ಜೊತೆಗೆ ಯುವಕರಿಗೆ ಕ್ಷೇತ್ರ ಬಿಟ್ಟುಕೊಟ್ಟು ಪಕ್ಷ ನಿಷ್ಠೆ ಮೆರೆದ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕೆಲ ಹಿರಿಯರಿಗೆ ಟಿಕೆಟ್ ನೀಡದೆ ಹೊಸ ಮುಖ ಪರಿಚಯ ಮಾಡಬೇಕು ಎನ್ನುವ ನಿರ್ಣಯದಿಂದ ಕೆ ಎಸ್ ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ಗೆ ಚುನಾವಣಾ ನಿವೃತ್ತಿ ಪಡೆಯುವಂತೆ ಹೈಕಮಾಂಡ್ ಸೂಚಿಸಿತ್ತು. ಅದರಂತೆ ಈಶ್ವರಪ್ಪ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಜಗದೀಶ್ ಶೆಟ್ಟರ್ ಹೈಕಮಾಂಡ್ ವಿರುದ್ಧ ತಿರುಗಿಬಿದ್ದು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿ ಸ್ಪರ್ಧೆ ಮಾಡಿದ್ದಾರೆ. ಪಕ್ಷದ ವಿರುದ್ಧ ದನಿ ಎತ್ತದೆ ಸೂಚನೆ ಪಾಲಿಸಿದ ಮಾಜಿ ಸಚಿವ ಈಶ್ವರಪ್ಪ ಬಗ್ಗೆ ಮೋದಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಪುತ್ರನಿಗೆ ಟಿಕೆಟ್ ಸಿಗದಿದ್ದರೂ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸದೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿರುವುದು ನರೇಂದ್ರ ಮೋದಿ ಸಂತಸಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಪಕ್ಷದ ವರಿಷ್ಠರು ಚನ್ನಬಸಪ್ಪರನ್ನು ಆಯ್ಕೆ ಮಾಡಿದ್ದಾರೆ: ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಈಶ್ವರಪ್ಪ
ಖುದ್ದಾಗಿ ಪ್ರಧಾನಿ ಮೋದಿ ಅವರೇ ಈಶ್ವರಪ್ಪನವರಿಗೆ ದೂರವಾಣಿ ಕರೆ ಮಾಡಿ ನಿಮ್ಮ ಜೊತೆಗೆ ನಾನಿದ್ದೇನೆ ಎಂಬ ಭರವಸೆ ನೀಡಿದ್ದಾರೆ. ನಿಮ್ಮ ನಿರ್ಧಾರ ಇತರರಿಗೆ ಆದರ್ಶಪ್ರಾಯವಾಗಿದೆ ಎಂದು ಕೊಂಡಾಡಿದ್ದಾರೆ. ಇದಕ್ಕೆ ಅಷ್ಟೇ ವಿನಮ್ರವಾಗಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ. ಕೆಲವೇ ಕ್ಷಣ ಮಾತುಕತೆ ನಡೆದರೂ ಪ್ರಧಾನಿ ಮೋದಿ ಅವರ ಮನಗೆಲ್ಲುವಲ್ಲಿ ಈಶ್ವರಪ್ಪ ಸಫಲರಾಗಿದ್ದಾರೆ.
ಇನ್ನು ಪಕ್ಷದ ಸೂಚನೆ ಪಾಲಿಸಿ ಮೋದಿ ಮೆಚ್ಚುಗೆಗೆ ಪಾತ್ರವಾಗಿರುವ ಈಶ್ವರಪ್ಪಗೆ ಹೈಕಮಾಂಡ್ ಮುಖ್ಯ ಜವಾಬ್ದಾರಿ ಅಥವಾ ಉನ್ನತ ಸ್ಥಾನಮಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೋದಿ ಜೊತೆ ಈಶ್ವರಪ್ಪ ದೂರವಾಣಿಯಲ್ಲಿ ಮಾತನಾಡುವಾಗ ಅವರ ಪುತ್ರ ಕಾಂತೇಶ್ ಹಾಗೂ ಸೊಸೆ ಕುತೂಹಲದಿಂದ ಸಂಭಾಷಣೆ ಕೇಳುತ್ತಿದ್ದರು.
ಇದನ್ನೂ ಓದಿ : 'ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್. ಪೂಜಾರ ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ': ಕೆ.ಎಸ್. ಈಶ್ವರಪ್ಪ
ಶಿವಮೊಗ್ಗದಲ್ಲಿ ಕೆ ಎಸ್ ಈಶ್ವರಪ್ಪ ರಾಜಕೀಯ ಕಣದಿಂದ ಹಿಂದಕ್ಕೆ ಸರಿದ ಬಳಿಕ ಅವರ ಪುತ್ರ ಕಾಂತೇಶ್ ಈಶ್ವರಪ್ಪಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಭಾವಿಸಲಾಗಿತ್ತು. ಹಾಗೆಯೇ, ಈಶ್ವರಪ್ಪ ಪುತ್ರನಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಕೂಡ ಇತ್ತು. ಇದಕ್ಕೆ ಒಪ್ಪದ ಬಿಜೆಪಿ ಹೈಕಮಾಂಡ್ ಚನ್ನಬಸಪ್ಪಗೆ ಟಿಕೆಟ್ ನೀಡಿದೆ. ಹೀಗಾಗಿ, ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಶೆಟ್ಟರ್ ಕ್ಷಮೆ ಕೇಳಿ ತತ್ವ ಸಿದ್ಧಾಂತ ಉಳಿಸಿದ ಪಕ್ಷಕ್ಕೆ ವಾಪಸ್ ಬರಬೇಕು: ಈಶ್ವರಪ್ಪ