ಬೆಂಗಳೂರು: ಇಂದಿನ ಹೈಟೆಕ್ ಯುಗದಲ್ಲಿ ಸ್ಮಾರ್ಟ್ ಪೋನ್ ಬಳಸುವವರೇ ಹೆಚ್ಚು. ಅದರಲ್ಲಿಯೂ ಕರೆ ಬಂದರಂತೂ ಮುಗಿದುಹೋಯ್ತು. ರಸ್ತೆ ಅಂತಾ ಪರಿಜ್ಞಾನವಿಲ್ಲದೇ ಮಾತನಾಡಿಕೊಂಡು ಓಡಾಡುತ್ತಾರೆ. ಫೋನ್ನಲ್ಲಿ ಮಾತನಾಡಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುವವರನ್ನು ಗುರಿಯಾಗಿಸಿಕೊಂಡು ದುಬಾರಿ ಬೆಲೆಯ ಮೊಬೈಲ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಮಡಿವಾಳ ಪೊಲೀಸರು ಖೆಡ್ಡಾಕ್ಕೆ ಬೀಳಿಸಿದ್ದಾರೆ.
ಬೆಂಗಳೂರು ನಿವಾಸಿಗಳಾದ ಸೈಯದ್ ಪೈರೋಜ್, ಶಬ್ಬೀರ್ ಅಹಮ್ಮದ್, ತುಫೇಲ್ ಹಾಗೂ ಬರ್ಕತ್ ಎಂಬುವವರನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ ಒಟ್ಟು 15 ಲಕ್ಷ ಮೌಲ್ಯದ 60 ವಿವಿಧ ಕಂಪನಿಯ ಮೊಬೈಲ್ ಫೋನ್ಗಳನ್ನ ವಶಪಡಿಸಿಕೊಂಡಿದ್ದಾರೆ.
ಪೋನ್ನಲ್ಲಿ ಮಾತನಾಡಿಕೊಂಡು ಹೋಗುವ ಒಬ್ಬಂಟಿಗರೇ ಇವರ ಟಾರ್ಗೆಟ್: ಸುಲಭವಾಗಿ ಹಣ ಸಂಪಾದಿಸಲು ಹಾಗೂ ಐಷರಾಮಿ ಜೀವನ ಲೀಡ್ ಮಾಡಲು ನಾಲ್ಕು ಮಂದಿ ಆರೋಪಿಗಳು ಒಟ್ಟುಗೂಡಿ ಪೂರ್ವಸಂಚು ರೂಪಿಸಿ ಫೀಲ್ಡ್ ಗಿಳಿಯುತ್ತಿದ್ದರು. ಮೊಬೈಲ್ ಕಳ್ಳತನ ಮಾಡುವ ಸಲುವಾಗಿ ಹಗಲು - ರಾತ್ರಿ ಎನ್ನದೇ ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿ ಬೈಕ್ ನಲ್ಲಿ ಮೊಬೈಲ್ ಕಸಿಯುವ ಪ್ರವೃತ್ತಿ ಬೆಳೆಸಿಕೊಂಡಿದ್ದರು.
ಕಳೆದ ಎರಡು ವರ್ಷಗಳಿಂದ ಇದೇ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಮಡಿವಾಳದಲ್ಲಿ ಕೃತ್ಯವೆಸಗಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡು ನಾಲ್ವರನ್ನ ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ಅವರು ತಿಳಿಸಿದ್ದಾರೆ.
ಕದ್ದ ಫೋನ್ ಒಎಲ್ಎಕ್ಸ್ನಲ್ಲಿ ಕಡಿಮೆ ಬೆಲೆಗೆ ಮಾರಾಟ: ದಾರಿಹೋಕರನ್ನು ಗುರಿಯಾಗಿಸಿಕೊಂಡು ಮೊಬೈಲ್ಗಳನ್ನು ಅವರಿಂದ ಸುಲಿಗೆ ಮಾಡಿದ್ದ ಸ್ಮಾರ್ಟ್ ಪೋನ್ಗಳನ್ನ ಆರೋಪಿಗಳು ಒಎಲ್ಎಕ್ಸ್ನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅಲ್ಲದೇ ಇನ್ನೂ ಕೆಲವು ಪೋನ್ಗಳನ್ನು ಅಪರಿಚಿತರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು.
ಕಳೆದ ಎರಡು ವರ್ಷಗಳಲ್ಲಿ ನಿರಂತರವಾಗಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಮಡಿವಾಳ ಪೊಲೀಸರ ಅತಿಥಿಯಾಗಿದ್ದಾರೆ. ಇವರ ಬಂಧನದಿಂದ ಆರು ಸುಲಿಗೆ ಪ್ರಕರಣ ಭೇದಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.