ಬೆಂಗಳೂರು : ಯಾವ್ಯಾವ ಶಾಲೆ, ಕಾಲೇಜ್ಗಳಲ್ಲಿ ಹಿಜಾಬ್ ಮೊದಲಿನಿಂದ ಹಾಕಲು ಅವಕಾಶ ಕೊಡಲಾಗಿತ್ತೋ, ಅಂತಹ ಶಾಲೆಗಳಲ್ಲಿ ಅವಕಾಶ ಕೊಡಬೇಕೆಂದು ಮನವಿ ಮಾಡಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ಹಿಜಾಬ್ ವಿಚಾರ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಜೊತೆ ಸಭೆ ನಡೆಸಿದ ನಂತರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದೊಂದು ಷಡ್ಯಂತ್ರದ ಕೆಲಸ. ಮೊಂಡು ಸರ್ಕಾರ ಇದು ಎಂದು ಕಿಡಿಕಾರಿದರು. ಇದ್ದಕ್ಕಿದ್ದ ಹಾಗೆ ಕೇಸರಿ ಶಾಲು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್ ಮಾತನಾಡಿ, ಶಿಕ್ಷಣ ಸಚಿವರಿಗೆ ಈ ಕುರಿತಾಗಿ ಮನವಿ ನೀಡಿದ್ದೇವೆ. ರಾಜ್ಯದಲ್ಲಿ ಕೋರ್ಟ್ ಆದೇಶ ಅನುಸರಿಸಿ, ಅದನ್ನು ಹೊರತು ಪಡಿಸಿ ಬೇರೆ ಏನು ಮಾಡಬೇಡಿ ಎಂದು ಮನವಿ ಮಾಡಿದ್ದೇವೆ ಎಂದರು.
ಯಾವ ಯಾವ ಸಂಸ್ಥೆಯಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿ ಮಾಡಿರುವ ಯುನಿಫಾರ್ಮ್ಗಳನ್ನು ಮಾತ್ರ ಮುಂದುವರೆಸಬೇಕು ಎಂದಿದೆ. ಕೆಲವೊಂದು ಖಾಸಗಿ ಶಾಲೆಗಳಲ್ಲಿ ಯುನಿಫಾರ್ಮ್ ಇಲ್ಲ, ಅಂತಹ ಶಾಲೆಗಳಿಗೆ ಹೋಗಿ ಬಲವಂತ ಮಾಡಬೇಡಿ ಎಂದು ಮನವಿ ಮಾಡಿದ್ದೇವೆ. ಅದರಂತೆ ಅನುಸರಿಸಿ ಎಂದು ಮನವಿ ಮಾಡಿದ್ದೇವೆ ಅದಕ್ಕೆ ನಾಗೇಶ್ ಕೂಡ ಒಪ್ಪಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಹಿಜಾಬ್ ವಿಚಾರ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ತಮ್ಮ ಕಚೇರಿಯಲ್ಲಿ ಕಾಂಗ್ರೆಸ್ ನ ಮುಸ್ಲಿಂ ಸಮುದಾಯದ ಶಾಸಕರ ಜೊತೆ ಮಾತುಕತೆ ನಡೆಸಿದರು. ಇಂದು ನಡೆದ ಅನೌಪಚಾರಿಕ ಸಭೆಯಲ್ಲಿ ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್, ಎನ್ ಎ ಹ್ಯಾರೀಸ್, ರಿಜ್ವಾನ್ ಹರ್ಷದ್, ಸಲೀಂ ಅಹ್ಮದ್, ಸಿಎಂ ಇಬ್ರಾಹಿಂ, ರಹೀಂಖಾನ್ ಭಾಗವಹಿಸಿದ್ದರು.
ಇದನ್ನೂ ಓದಿ : ಹಿಜಾಬ್ ಪ್ರಕರಣ: ನಿಯಮಾನುಸಾರ ಸಲ್ಲಿಸದ ಅರ್ಜಿ ವಜಾ ಮಾಡಿದ ಕೋರ್ಟ್.. ವಿಚಾರಣೆ ನಾಳೆಗೆ ಮುಂದೂಡಿಕೆ