ಬೆಂಗಳೂರು : ಯಾರು ಬೇಕಾದರೂ ವಿರೋಧಿಸಲಿ, ಬಜೆಟ್ ನಿಜಕ್ಕೂ ಚೆನ್ನಾಗಿದೆ ಎಂದು ಲೆಹರ್ ಸಿಂಗ್ ಸಮರ್ಥಿಸಿಕೊಂಡರು.
ವಿಧಾನಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಮಹಿಳಾ ಸಬಲೀಕರಣ, ಗೋಶಾಲೆ ನಿರ್ಮಾಣ, ಮೂಲ ಸೌಕರ್ಯ ಅಭಿವೃದ್ದಿ, ಕೃಷಿ, ರೈತರ ಹಿತರಕ್ಷಣೆಗೆ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ 250 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಿಂದೆ ಯಡಿಯೂರಪ್ಪ ಬೇರೆ ಪಕ್ಷ ಕಟ್ಟಿದ ಕಾರಣಕ್ಕೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅವರ ಅಧಿಕಾರಾವಧಿಯಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ನಮ್ಮ ಸರ್ಕಾರ ರೈತ ಹಿತ ಕಾಪಾಡಿದೆ ಎಂದರು.
ಶಿಕ್ಷಣ ಗುಣಮಟ್ಟ ಹೆಚ್ಚಾಗಬೇಕಿದೆ. ಈ ಮೊದಲು ಶ್ರೀಮಂತರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿರಲಿಲ್ಲ. ಆದರೆ, ಇಂದು ಆಟೊ ಚಾಲಕರು ಕೂಡ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ದೆಹಲಿ, ಕೇರಳ ಮಾದರಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಆಗಬೇಕಿದೆ. ಕೇವಲ ಬಜೆಟ್ನಲ್ಲಿ ಹಣ ಮೀಸಲಿಡುವುದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಲ್ಲ. ಸೋರಿಕೆ, ಅವ್ಯವಹಾರ ನಿಯಂತ್ರಣಕ್ಕೆ ಬರಬೇಕು. ಪ್ರತಿಪಕ್ಷ ಕೂಡ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಸಲಹೆ ನೀಡಬೇಕು. ಜನಪ್ರತಿನಿಧಿಗಳಾಗಿ ನಮ್ಮ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.
ಓದಿ : ಆನ್ಲೈನ್ ಶಿಕ್ಷಣದಿಂದ ಕಣ್ಣುಗಳ ಮೇಲೆ ದುಷ್ಪರಿಣಾಮ: ತಜ್ಞರ ವರದಿ ಪಾಲನೆಗೆ ಬದ್ಧವೆಂದ ಸುರೇಶ್ ಕುಮಾರ್
ಸಂಶೋಧನೆ, ಡಿಜಿಟಲೀಕರಣ ಹೆಚ್ಚಾಗಬೇಕು. ಆಗ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ. ಬಜೆಟ್ ಬಡವರ ಪರ ಇರಬೇಕು, ಜಾತಿ ಪರ ಇರಬಾರದು. ಬಡವ ಯಾವತ್ತೂ ಬಡವನೇ, ಜಾತಿ ನೋಡಿ ಬಡತನ ಅಳೆಯಬಾರದು. ಬಡವರ ಪರ ಕೆಲಸ ಮಾಡದಿದ್ದರೆ, ಗಮನ ಹರಿಸದಿದ್ದರೆ ಅಭಿವೃದ್ಧಿ ಅಸಾಧ್ಯ. ಉನ್ನತ ಶಿಕ್ಷಣ ಗುಣಮಟ್ಟ ಹೆಚ್ಚಬೇಕು, ಇದೇ ರಾಜ್ಯದ ಭವಿಷ್ಯ. ಅದೇ ರೀತಿ ಆರೋಗ್ಯ ಕ್ಷೇತ್ರ ಕೂಡ ಪ್ರಮುಖವಾಗಿದೆ. ಬೆಂಗಳೂರು ನಗರದ ಸಂಚಾರ ದಟ್ಟಣೆ, ಕಾಮಗಾರಿ ಪ್ರಗತಿಯಲ್ಲಿರುವ ಕಾರಣದಿಂದ ಸಮಸ್ಯೆ ಹೆಚ್ಚಾಗಿದೆ ಎಂದರು.