ಬೆಂಗಳೂರು: ವಿಧಾನ ಪರಿಷತ್ತಿಗೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ತೀವ್ರವಾದ ಲಾಬಿ ಆರಂಭವಾಗಿದೆ.
ಮೂರೂ ಪಕ್ಷಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಆಕಾಂಕ್ಷಿಗಳು ತಮಗೆ ಮೇಲ್ಮನೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿಕೊಳ್ಳತೊಡಗಿದ್ದಾರೆ.
ಬಿಜೆಪಿ ಆಕಾಂಕ್ಷಿಗಳು ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಅಶ್ವತ್ಥನಾರಾಯಣ, ಹಿರಿಯರಾದ ಕೆ.ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್ ಅಶೋಕ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮತ್ತಿತರ ನಾಯಕರನ್ನು ಭೇಟಿ ಮಾಡಿ ಪಕ್ಷದ ಟಿಕೆಟ್ಗಾಗಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಭಾರತೀಯ ಜನತಾ ಪಕ್ಷದಲ್ಲಿ ಅಬಕಾರಿ ಸಚಿವ ಆರ್ ಶಂಕರ್, ಕಳೆದ ಉಪಚುನಾವಣೆಯಲ್ಲಿ ಪರಾಭವಗೊಂಡಿರುವ ಮಾಜಿ ಸಚಿವರಾದ ಹೆಚ್. ವಿಶ್ವನಾಥ್, ಎಂ.ಟಿ.ಬಿ ನಾಗರಾಜ್ ಎಂ ಎಲ್ ಸಿ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಇವರನ್ನು ಹೊರತುಪಡಿಸಿ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರವಹಿಸಿದ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸೇರಿದಂತೆ ಹಲವರು ಟಿಕೆಟ್ಗಾಗಿ ಲಾಬಿ ಆರಂಭಿಸಿದ್ದಾರೆ ಎನ್ನಲಾಗಿದೆ.
ಜೂನ್ 29 ರಂದು ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷದ ನಜೀರ್ ಅಹ್ಮದ್, ಎಂ.ಸಿ ವೇಣುಗೋಪಾಲ್, ಜಯಮ್ಮ ಹೆಚ್ ಎಂ ರೇವಣ್ಣ ಎನ್.ಎಸ್ ಭೋಸರಾಜು ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ನಿಂದ ಟಿ.ಎ ಶರವಣ, ಪಕ್ಷೇತರ ಸದಸ್ಯ ಡಿ.ಯು ಮಲ್ಲಿಕಾರ್ಜುನ ಈ ತಿಂಗಳ 30ರಂದು ನಿವೃತ್ತರಾಗಲಿದ್ದಾರೆ. ಇವರ ಸ್ಥಾನಗಳಿಗೆ ಈಗ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಭಾರಿ ಪೈಪೋಟಿ ಕಂಡು ಬರುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ನಜೀರ್ ಅಹ್ಮದ್, ಇಕ್ಬಾಲ್ ಅಹ್ಮದ್ ಸರಡಗಿ ಮತ್ತು ಕೆ. ಅಬ್ದುಲ್ ಜಬ್ಬಾರ್ ನಿವೃತ್ತರಾಗುತ್ತಿದ್ದು, ಮೂವರು ಅಲ್ಪಸಂಖ್ಯಾತರ ಪೈಕಿ ಒಬ್ಬ ಅಲ್ಪಸಂಖ್ಯಾತರಿಗಾದರೂ ಅವಕಾಶ ನೀಡಬೇಕೆನ್ನುವ ಕೂಗು ಕೇಳಿಬರುತ್ತಿದೆ. ಈ ಸಂಬಂಧ ಮಾಜಿ ಸಚಿವ ಜಮೀರ್ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ರಿಜ್ವಾನ್ ಕಳೆದ ರಾತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯತೆಯಿದ್ದು, ಅಪೂರ್ಣ ಅವಧಿಗೆ ಆಯ್ಕೆಯಾಗಿರುವ ಎಂ.ಸಿ ವೇಣುಗೋಪಾಲ್ ಮತ್ತು ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ಬೆಂಬಲಿಗರಾದ ತಿಪ್ಪಣ್ಣ ಕೆಮಕನೂರ್ ಅವರೂ ಸಹ ಪುನರಾಯ್ಕೆ ಬಯಸಿ ಲಾಬಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಪಕ್ಷ ತನ್ನ ಪಕ್ಷದ ಶಾಸಕರ ಸಂಖ್ಯೆಗನುಗುಣವಾಗಿ ಕೇವಲ ಒಬ್ಬರನ್ನು ಮಾತ್ರ ಆಯ್ಕೆ ಮಾಡುವ ಅವಕಾಶ ಹೊಂದಿದೆ. ಈ ಒಂದು ಸ್ಥಾನಕ್ಕೆ ರಾಜ್ಯಸಭೆ ಸದಸ್ಯರಾಗಿ ಈ ತಿಂಗಳು ನಿವೃತ್ತಿ ಹೊಂದುತ್ತಿರುವ ಸಂಸದ ಕುಪೇಂದ್ರ ರೆಡ್ಡಿ ಅವರ ಹೆಸರು ಅಂತಿಮಗೊಂಡಿದೆ ಎಂದು ಹೇಳಲಾಗುತ್ತಿದೆ. ಟಿ.ಎ ಶರವಣ ಪುನರಾಯ್ಕೆಗೆ ಯತ್ನಿಸುತ್ತಿರುವರಾದರೂ ಈ ಬಾರಿ ದೇವೇಗೌಡರ ಕೃಪಾಕಟಾಕ್ಷ ಅನುಮಾನ ಎಂದೇ ಹೇಳಲಾಗುತ್ತಿದೆ.
ರಾಜ್ಯಸಭೆಯ ಅಭ್ಯರ್ಥಿಗಳ ಆಯ್ಕೆ ಕಸರತ್ತು ಪೂರ್ಣಗೊಳಿಸಿ ನಿರಾಸೆಗೊಂಡ ಆಕಾಂಕ್ಷಿತರನ್ನು ಸಮಾಧಾನ ಪಡಿಸುವಷ್ಟರಲ್ಲೇ ವಿಧಾನಪರಿಷತ್ತಿನ ಚುನಾವಣೆ ಘೋಷಣೆಯಾಗಿರುವುದು ರಾಜಕೀಯ ಪಕ್ಷಗಳಿಗೆ, ಅದರಲ್ಲೂ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ವೇದಿಕೆಯಾಗಿದೆ.