ಬೆಂಗಳೂರು : ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆಗೆ ಈ ಬಾರಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕೆಂದು ಸಭೆಯಲ್ಲಿ ತೀರ್ಮಾನವಾಗಿದೆ ಅಂತಾ ಜೆಡಿಎಸ್ ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ತಿಳಿಸಿದ್ದಾರೆ.
ಜೆಪಿನಗರದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಿವಾಸದಲ್ಲಿ ಇಂದು ರಾಜರಾಜೇಶ್ವರಿನಗರ ಕ್ಷೇತ್ರದ ಮುಖಂಡರ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಪ್ಪಾಜಿಗೌಡರು, ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್ ಪ್ರಕಾಶ್, ಆರ್‌ಆರ್‌ನಗರ ಕ್ಷೇತ್ರದ ಅಧ್ಯಕ್ಷ ಬೆಟ್ಟಸ್ವಾಮಿಗೌಡ ಹಾಗೂ ಜ್ಞಾನಭಾರತಿ ವಾರ್ಡ್ ಸದಸ್ಯ ಕೃಷ್ಣಮೂರ್ತಿ ಹೆಸರು ಅಂತಿಮವಾಗಿದೆ. ಈ ಮೂವರಲ್ಲಿ ಒಬ್ಬರನ್ನು ನಮ್ಮ ವರಿಷ್ಠರು ಅಂತಿಮಗೊಳಿಸುತ್ತಾರೆ ಎಂದು ಹೇಳಿದರು.
ಕಳೆದ ಎರಡು ಚುನಾವಣೆಯಲ್ಲಿ 50-60 ಸಾವಿರಕ್ಕೂ ಹೆಚ್ಚು ಮತ ಜೆಡಿಎಸ್ ಪಡೆದಿತ್ತು. 2008, 2013ರ ಚುನಾವಣೆಯಲ್ಲಿ ನಮ್ಮ ಪಕ್ಷ ಉತ್ತಮ ಮತಗಳಿಸಿತ್ತು. ಎರಡು ಬಾರಿ ಸ್ಪರ್ಧೆ ಮಾಡಿದ್ದವರು ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. 2018ರಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಸದ್ಯ ರಾಜಕೀಯದಲ್ಲಿ ನಿಷ್ಕ್ರಿಯರಾಗಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರು ಭ್ರಮನಿರಸರಾಗಿದ್ದಾರೆ.
ಈ ಬಾರಿ ಜೆಡಿಎಸ್ ಗೆಲ್ಲುವ ಅವಕಾಶ ಹೆಚ್ಚಿದೆ. ಹಾಗಾಗಿ, ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುತ್ತದೆ ಎಂದರು. ಜೆಡಿಎಸ್ ಪಕ್ಷದ ಮುಖಂಡರಿಂದ ಮೂರು ಅಭ್ಯರ್ಥಿಗಳ ಹೆಸರು ಸಭೆಯಲ್ಲಿ ಪ್ರಸ್ತಾಪವಾಯಿತು. ಮುಂದಿ ದಿನಗಳಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.