ಬೆಂಗಳೂರು: ''ಶಾಸಕರ ಶಿಫಾರಸ್ಸು ಪತ್ರ ಪರಿಶೀಲನೆ ಮಾಡಿ ವರ್ಗಾವಣೆ ಮಾಡಲಾಗುವುದು'' ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ''ಬಹುಶಃ ಇನ್ನೊಂದು ವಾರದಲ್ಲಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪೂರ್ಣವಾಗಲಿದೆ. ಒಂದು ವಾರದೊಳಗೆ ಅಂತಿಮ ಮಾಡುತ್ತೇವೆ. ವರ್ಗಾವಣೆಗೆ ಶಾಸಕರ ಶಿಫಾರಸ್ಸು ಪತ್ರ ಒಂದು ಹಂತ. ಶಾಸಕರ ಶಿಫಾರಸ್ಸು ಪತ್ರ ಪರಿಶೀಲನೆ ಮಾಡಿ ವರ್ಗಾವಣೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ: ''ಸದಾಶಿವ ಆಯೋಗದ ವರದಿ ಜಾರಿಗೆ ನಾವು ಕಮಿಟ್ ಆಗಿದ್ದೇವೆ'' ಎಂದು ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ''ಬಿಜೆಪಿಯವರು ಹಿಂದೆ ಶೇ 2% ಹಂಚಿಕೆ ಮಾಡಿದ್ದಾರೆ. ಆದರೆ, ಅವರ ಕೇಂದ್ರ ಮಂತ್ರಿ ನಾರಾಯಣಸ್ವಾಮಿಯೇ ಇದು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ನಾವು ಕುಳಿತು ಚರ್ಚೆ ಮಾಡುತ್ತೇವೆ. ಯಾರಿಗೆ ಎಷ್ಟೆಷ್ಟು ಮೀಸಲಾತಿ ಹಂಚಿಕೆ ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ'' ಎಂದು ತಿಳಿಸಿದರು.
ನ್ಯಾಯ ಎತ್ತಿ ಹಿಡಿದ ಉಚ್ಚ ನ್ಯಾಯಾಲಯ: ರಾಹುಲ್ ಗಾಂಧಿ ಅನರ್ಹತೆ ವಾಪಸ್ ಪಡೆದ ವಿಚಾರವಾಗಿ ಪ್ರತಿಕ್ರಿಯಿಸುತ್ತ, ''ನ್ಯಾಯಾಲಯ ನಿಜವಾಗಿ ನ್ಯಾಯ ಎತ್ತಿ ಹಿಡಿಯುತ್ತೆ ಅನ್ನೋದಕ್ಕೆ ಇದು ಒಂದು ನಿದರ್ಶನ. ರಾಹುಲ್ ಪ್ರಚಾರದ ವೇಳೆ ಆಡಿದ ಒಂದು ಮಾತಿಗೆ ಲಕ್ಷಾಂತರ ಮತದಾರರು ಆಯ್ಕೆ ಮಾಡಿದ ಸಂಸತ್ ಸದಸ್ಯತ್ವ ರದ್ದು ಮಾಡಲಾಗಿತ್ತು. ಅದು ನ್ಯಾಯ ಸಮ್ಮತವಲ್ಲ ಎಂಬ ದೃಷ್ಟಿಕೋನದಲ್ಲಿ ಉಚ್ಚ ನ್ಯಾಯಾಲಯ ಹೇಳಿದೆ'' ಎಂದರು.
''ಬಹುಶಃ ಮುಂದೆ ಅಂತಿಮ ತೀರ್ಪು ರಾಹುಲ್ ಪರ ಬರಲಿದೆ. ಇದಕ್ಕೂ ಕೆಟ್ಟದಾಗಿ ಅವಹೇಳನವಾಗಿ ಮಾತನಾಡಿರುವುದನ್ನು ನೋಡಿದ್ದೇವೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ರಾಹುಲ್ ಗಾಂಧಿ ಲೋಕಸಭೆಯಲ್ಲಿ ಇವತ್ತಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ತಿಳಿಸಿದರು.
ಗೌಪ್ಯವಾಗಿ ಬರೆದಿದ್ದಾರೋ ಗೊತ್ತಿಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ''ಅದು ನನಗೆ ಗೊತ್ತಿಲ್ಲ, ಗೌಪ್ಯವಾಗಿ ಬರೆದಿದ್ದಾರೇನೊ ಗೊತ್ತಿಲ್ಲ. ಮಂಡ್ಯ ಪೊಲೀಸರು ಕೂಡ ನನಗೇನು ನೀಡಿಲ್ಲ'' ಎಂದರು.
ಕೆ. ಎಸ್. ಈಶ್ವರಪ್ಪ ಪ್ರತಿಕ್ರಿಯೆ: ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ. ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳು ನೇರವಾಗಿ ಚಲುವರಾಯಸ್ವಾಮಿ ವಿರುದ್ಧ ದೂರು ಕೊಟ್ಟಿದ್ದಾರೆ. ಸಚಿವರೊಬ್ಬರ ವಿರುದ್ಧ ಅಧಿಕಾರಿಗಳು ನೇರವಾಗಿ ರಾಜ್ಯಪಾಲರಿಗೆ ದೂರು ಕೊಟ್ಟಿರುವುದು ಇತಿಹಾಸದಲ್ಲಿ ಇದೇ ಮೊದಲು. ಕೃಷಿ ಅಧಿಕಾರಿಗಳ ದೂರಿನಲ್ಲಿ ಇರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ" ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹೊಟ್ಟೆ ಕಿಚ್ಚು, ಅಸೂಯೆಗೆ ಮದ್ದಿಲ್ಲ.. ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್