ಬೆಂಗಳೂರು: ಪ್ರತಿ ಬಾರಿಯೂ ಸಚಿವರಾಗುವವರೇ ಆಗುತ್ತಿದ್ದಾರೆ, ಹೊಸಬರಿಗೆ ಸ್ಥಾನ ಕೊಟ್ಟರೆ ಪಕ್ಷ 150 ಸ್ಥಾನ ಗೆಲ್ಲಲು ಅನುಕೂಲವಾಗಲಿದೆ ಎಂದು ಬಿಜೆಪಿ ಹಿರಿಯ ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ಓದಿ: ಬೆಳಗಾವಿ ಲೋಕಸಭೆ ಬೈ ಎಲೆಕ್ಷನ್ಗೆ ನಾನು ಸ್ಪರ್ಧೆ ಮಾಡಲ್ಲ.. ಸಚಿವ ಜಗದೀಶ್ ಶೆಟ್ಟರ್
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಬಾರಿ ಬಿಜೆಪಿ ಸರ್ಕಾರ ಬಂದಿದೆ. ಆದರೆ, ಪ್ರತಿ ಬಾರಿಯೂ ಸಚಿವರು ಆದವರೇ ಆಗುತ್ತಿದ್ದಾರೆ. ಖಾತೆ ನಿಭಾಯಿಸುವ ಶಕ್ತಿ ಇರುವಂತಹವರಿಗೆ ಅವಕಾಶ ಕೊಡಬೇಕು. ಮತ್ತೆ ಸಂಪುಟ ಪುನಾರಚನೆ ಮಾಡಿದಾಗ ಅವಕಾಶ ಕಲ್ಪಿಸಬೇಕು. ಹಾಗೆ ಮಾಡಿದ್ದೇ ಆದಲ್ಲಿ 2023 ರಲ್ಲಿ ಪಕ್ಷ, ಸರ್ಕಾರಕ್ಕೆ ಹೆಚ್ಚಿನ ವರ್ಚಸ್ಸು ಬರಲಿದೆ. ಆ ಮೂಲಕ 150 ಕ್ಷೇತ್ರಗಳನ್ನು ಗೆಲ್ಲಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಂಪುಟ ವಿಸ್ತರಣೆಯಲ್ಲಿ ಅವಕಾಶ ಕೈತಪ್ಪಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಈಗ ಸಂಪುಟ ವಿಸ್ತರಣೆ ಆಗಿ ಹೋಗಿದೆ. ನಾನು 61ನೇ ಇಸವಿಯಿಂದ ರಾಜಕೀಯಕ್ಕೆ ಬಂದಿದ್ದು, ಆರು ಬಾರಿ ಶಾಸಕನಾದವನು. ನಾನು ಸಿಎಂ, ವರಿಷ್ಠರಿಗೆ ಅವಕಾಶ ಕೇಳಿದ್ದೆ. ಅನುಭವಿ ಆಗಿರುವುದರಿಂದ ಇದೆಲ್ಲಾ ಸಹಜ. ಆದರೆ ನನಗೆ ಅವಕಾಶ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಪಡಿಸಿದರು.
ರೇಣುಕಾಚಾರ್ಯ ಪ್ರತ್ಯೇಕ ಸಭೆ ವಿಚಾರವಾಗಿ ಮಾತನಾಡಿದ ಅವರು, ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದಿದ್ದರು. ಕೋರ್ ಕಮಿಟಿಯಲ್ಲಿ ಭೇಟಿ ಮಾಡಿ ಮಾತನಾಡಿದ್ದಾರೆ. ಯಾವುದೇ ಹೇಳಿಕೆ ಕೊಡದಂತೆ ಸೂಚನೆ ಕೊಟ್ಟಿದ್ದು, ಹಾಗಾಗಿ ನಾವು ಏನೂ ಮಾತನಾಡುವಂತಿಲ್ಲ. ಪಕ್ಷದ ಆದೇಶ ಮೀರಿ ಕೆಲಸ ಮಾಡುವವನಲ್ಲ. ಏನಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಮಾತನಾಡುತ್ತೇನೆ ಎಂದರು.
ಸಿಡಿ ಮೂಲಕ ಸಿಎಂಗೆ ಬ್ಲ್ಯಾಕ್ ಮೇಲ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ತಿಪ್ಪಾರೆಡ್ಡಿ, ಆ ಸಿಡಿ ಏನು ಅನ್ನೋದೆ ಗೊತ್ತಿಲ್ಲ. ಸಿಡಿಯನ್ನು ಹೇಗೆ ಪ್ಲೇ ಮಾಡಬೇಕು ಅನ್ನೋದೆ ತಿಳಿದಿಲ್ಲ. ನಾವು ಚಿತ್ರದುರ್ಗದವರು, ಸಿಡಿ ಬಗ್ಗೆಯಲ್ಲಾ ಗೊತ್ತಿಲ್ಲ. ಯಾರು ಬ್ಲ್ಯಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೆ ಎಂಬುದು ಮಾಹಿತಿ ಇಲ್ಲ. ನನಗಂತೂ ಸಿಡಿ ಬ್ಲ್ಯಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆಯುವ ಸನ್ನಿವೇಶ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.