ಬೆಂಗಳೂರು: "ಜಾತಿ ಗಣತಿ ವರದಿ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ದ್ವಂದ್ವ ನಿಲುವು ಪ್ರದರ್ಶಿಸುತ್ತಿದ್ದಾರೆ. ನಾನು ಜಾತಿ ಗಣತಿ ವರದಿಯ ಪರವಾಗಿದ್ದೇನೆ ಅಂತ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ" ಎಂದು ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿಎಂ ಪದೇ ಪದೆ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ವರದಿಯ ಸಾಧಕ, ಬಾಧಕಗಳ ಕುರಿತು ಚರ್ಚೆ ಆಗಬೇಕು. ಇದಕ್ಕೆ ಒಳ್ಳೆಯ ವೇದಿಕೆಯನ್ನು ಸರ್ಕಾರ ಕಲ್ಪಿಸಿಕೊಟ್ಟರೆ ಉತ್ತಮ" ಎಂದರು.
"ವರದಿ ಬಿಡುಗಡೆಗೆ ಮೊದಲೇ ಹಾಗಿದೆ, ಹೀಗಿದೆ ಅಂತ ಅಭಿಪ್ರಾಯ ಶುರುವಾಗಿದೆ. ಅವರ ಮಂತ್ರಿಗಳೇ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ವರದಿ ಸೋರಿಕೆ ಆಗಿದ್ದು ಹೇಗೆ?. ರಾಹುಲ್ ಗಾಂಧಿ ಹೇಳಿದ್ದಾರೆ ಅಂತ ವರದಿ ಪಡೆಯಲು ಮುಂದಾಗಿದ್ದಾರೆ. ವರದಿಯ ಚರ್ಚೆಗೆ ಅವಕಾಶ ಕೊಡಲಿ, ತಜ್ಞರ ಅಭಿಪ್ರಾಯ ಪಡೆದು ಸರ್ಕಾರ ಮುಂದುವರೆಯಲಿ. ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮುಖ್ಯಮಂತ್ರಿಗಳೇ? ಎಂದು ಪ್ರಶ್ನಿಸಿದ ಅವರು, ಇದು ಹಲವು ಅನುಮಾನಕ್ಕೆ ಎಡೆ ಮಾಡಿಕೊಡ್ತಿದೆ. ಹಿಂದುಳಿದ ವರ್ಗವನ್ನು ಕತ್ತಲಲ್ಲಿಡೋ ಕೆಲಸ ಮಾಡ್ತಿದ್ದಾರೆ. ಈ ವಿಚಾರ ಕೂಡಲೇ ಚರ್ಚೆಗೆ ಬರಲಿ" ಎಂದು ಒತ್ತಾಯಿಸಿದರು.
"ಜಾತಿ ಗಣತಿ ವರದಿಯ ಮೂಲ ಪ್ರತಿ ನಾಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರದ ದಾಖಲೆಯೇ ನಾಪತ್ತೆ ಆಗುತ್ತೆ ಅಂದರೆ ಇದು ಗಂಭೀರ ವಿಚಾರ. ಯಾವ ವರದಿ ಇಟ್ಟುಕೊಂಡು ಇವರು ಚರ್ಚೆ ಮಾಡ್ತಿದ್ದಾರೆ. ಇದರ ಬಗ್ಗೆ ಸಿಎಂ ಅವರೇ ಸ್ಪಷ್ಟಪಡಿಸಬೇಕು. ವರದಿ ಕಳೆದುಹೋಗಿದೆ ಅಂತ ಆಯೋಗದ ಅಧ್ಯಕ್ಷರು ಹೇಳ್ತಾರೆ. ಯಾವ ವಿಚಾರ ಇಟ್ಟುಕೊಂಡು ಹೇಳಿಕೆ ಕೊಡ್ತಿದ್ದಾರೆ?. ಸಿಎಂ ಒಂದು ಹೇಳಿಕೆ, ಡಿಸಿಎಂ ಒಂದು ಹೇಳಿಕೆ ಕೊಡ್ತಿದ್ದಾರೆ. ಸರ್ಕಾರದ ಒಂದು ದಾಖಲೆ ಕಳ್ಳತನ ಆಗಿದೆ. ಹಿಂದೆಯೂ ಅನೇಕ ವರದಿ ಕಳ್ಳತನ ಆರೋಪ ಕಾಂಗ್ರೆಸ್ ಸರ್ಕಾರದ ಮೇಲಿದೆ. ಕೇವಲ ಮತ ಬ್ಯಾಂಕಿಗೆ ಮಾತ್ರ ಹೇಳಿಕೆ ಸರಿಯಲ್ಲ. ವರದಿಯ ಅಂಶ ಸಾರ್ವಜನಿಕ ಚರ್ಚೆಗೆ ಬರಬೇಕು, ಅದಕ್ಕೆ ಸರ್ಕಾರವೇ ವೇದಿಕೆ ಕಲ್ಪಿಸಬೇಕು" ಎಂದು ಆಗ್ರಹಿಸಿದರು.
"ವರದಿ ಸರಿಯಿಲ್ಲ ಅಂತ ಹೇಳಿ ಪತ್ರ ಬರೆಯುತ್ತಿದ್ದಾರೆ. ಪತ್ರ ಬರೆಯಬೇಕಾದರೆ ವರದಿ ಸೋರಿಕೆಯಾಗಿರಬೇಕು. ಸಿಎಂ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ನಾನು ವರದಿ ಸ್ವೀಕರಿಸಲು ಸಿದ್ಧ ಎನ್ನುತ್ತಾರೆ. ವರದಿ ಮೂಲ ಪ್ರತಿಯೋ, ಕಳ್ಳತನ ಪ್ರತಿಯೋ, ಜೆರಾಕ್ಸ್ ಪ್ರತಿಯೋ ಅಂತ ಸಿಎಂ ಸ್ಪಷ್ಟಪಡಿಸಬೇಕು" ಎಂದರು.
ಇದನ್ನೂ ಓದಿ: ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವಿಗೆ ಬದ್ಧ: ಡಿಸಿಎಂ ಡಿ ಕೆ ಶಿವಕುಮಾರ್