ಬೆಂಗಳೂರು: ಕೆಲ ಕಿಡಿಗೇಡಿಗಳು ಇಂತಹ ದುಷ್ಕೃತ್ಯವೆಸಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಸಾವಿರಾರು ಜನರು ಪೆಟ್ರೋಲ್ ಬಾಂಬ್, ಲಾಂಗ್ ಸಮೇತ ನುಗ್ಗಿ ಮನೆ ಹಾಗೂ ಕಾರುಗಳನ್ನು ಸುಟ್ಟು ಹಾಕಿದ್ದಾರೆ. ಶಾಸಕನಾದ ನನಗೇ ರಕ್ಷಣೆ ಇಲ್ಲದಾಗಿದೆ ಎಂದು ಶ್ರೀನಿವಾಸಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಗಲಭೆ ಕುರಿತು ಚರ್ಚಿಸಿದರು. ಈ ವೇಳೆ ಮಾತಿನ ಮಧ್ಯೆ ಭಾವುಕರಾಗುತ್ತಿದ್ದ ಶಾಸಕ ಶ್ರೀನಿವಾಸಮೂರ್ತಿ ಅವರನ್ನು ಸಚಿವ ಆರ್. ಅಶೋಕ್ ಸಂತೈಸುತ್ತಿದ್ದರು.
ನಾವು 50 ವರ್ಷಗಳಿಂದ ಬಾಳಿ ಬದುಕಿದ ಮನೆ ಅದು. ತಂದೆ- ತಾಯಿ ಕಟ್ಟಿದ ಮನೆ. 25 ವರ್ಷಗಳಿಂದ ಯಾವುದೇ ಘಟನೆಗಳು ನಡೆದಿರಲಿಲ್ಲ. ಈ ಘಟನೆಯ ಹಿಂದೆ ಯಾರೇ ಇದ್ದರೂ ಬಂಧಿಸಬೇಕು. ಅಶೋಕ್ ಅವರು ರಾತ್ರಿಯೇ ಮನೆ ಬಳಿ ಬಂದಿದ್ದರು. ಅವರು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ್ದಾರೆ. ಅವರು ಬಂದ ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದಾರೆ. ನಮಗೆ ರಕ್ಷಣೆ ಬೇಕು. ಸಿಐಡಿ, ಸಿಬಿಐ ಯಾವುದಕ್ಕೆ ಬೇಕಾದ್ರೂ ಪ್ರಕರಣದ ತನಿಖೆಯನ್ನು ವಹಿಸಲಿ. ತಪ್ಪು ಯಾರೇ ಮಾಡಿದ್ದರೂ ಕ್ರಮ ತೆಗದುಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾತ್ರಿಯೇ ಘಟನಾ ಸ್ಥಳಕ್ಕೆ ಶಾಸಕರಾದ ಜಮೀರ್ ಅಹ್ಮದ್ ಹಾಗೂ ರಿಜ್ವಾನ್ ಅರ್ಷದ್ ಆಗಮಿಸಿ, ಪ್ರತಿಭಟನಾಕಾರರ ಮನವೊಲಿಸಿದ್ದಾರೆ. ಎಲ್ಲವೂ ಪೊಲೀಸ್ ತನಿಖೆ ನಂತರ ಬೆಳಕಿಗೆ ಬರಬೇಕಿದೆ. ಯಾರೊಂದಿಗೂ ವೈಮನಸ್ಸು ಬೆಳೆಸಿಕೊಂಡಿಲ್ಲ ಎಂದು ಶಾಸಕರು ಹೇಳಿದರು.