ಬೆಂಗಳೂರು : ರಿವಾಲ್ವಾರ್ ಪರವಾನಗಿ ನವೀಕರಣ ಮಾಡದೆ ಅಕ್ರಮವಾಗಿ ಇಟ್ಟುಕೊಂಡಿದ್ದ ಆರೋಪದಲ್ಲಿ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರನ್ನು ದೋಷಿ ಎಂದು ಪರಿಗಣಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಹಲವು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಬಳ್ಳಾರಿ ನಗರದ ಬ್ರೂಸ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ನ್ಯಾಯಾಲಯವು ವಿಚಾರಣೆ ನಡೆಸಿತು. 2005ರಲ್ಲಿ ಎನ್.ಪಿ.ಬೋರ್ ರಿವಾಲ್ವರ್‌ಗೆ ಆಗಿನ ಜಿಲ್ಲಾಧಿಕಾರಿ ಪರವಾನಗಿ ನೀಡಿದ್ದರು. ಪರವಾನಗಿ ನವೀಕರಿಸುತ್ತಿದ್ದ ಸೋಮಶೇಖರ್ ರೆಡ್ಡಿ 2009 ಡಿಸೆಂಬರ್ 31ರ ಬಳಿಕ ನವೀಕರಿಸಿರಲಿಲ್ಲ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆವೇಳೆ ಆರೋಪಿ ಪರ ವಕೀಲರು, ಈ ಘಟನೆ ನಡೆದ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷರು ಹಾಗೂ ಶಾಸಕರಾಗಿದ್ದರು. ಹೀಗಾಗಿ ಕೆಲಸದ ಒತ್ತಡ ಇತ್ತು. ಅಲ್ಲದೇ, ಮನೆಯ ನವೀಕರಣ ಚಟುವಟಿಕೆಯ ವೇಳೆ ಪರವಾನಗಿ ಪುಸ್ತಕ ಕಳೆದು ಹೋಗಿದ್ದ ಪರಿಣಾಮ ಪರವಾನಗಿ ಅವಧಿ ಮುಗಿದಿರುವ ಬಗ್ಗೆ ಗಮನಕ್ಕೆ ಬಂದಿರಲಿಲ್ಲ ಎಂದು ವಾದಿಸಿದ್ದರು.
ಈ ಅಂಶ ದಾಖಲಿಸಿಕೊಂಡ ನ್ಯಾಯಾಧೀಶರು, ರಿವಾಲ್ವಾರ್ ಪರವಾನಗಿ ನವೀಕರಣ ಮಾಡದಿರುವ ಸಂಬಂಧ ದಾಖಲಾಗಿರುವ ಪ್ರಕರಣ ಹೊರತುಪಡಿಸಿ ಬೇರೆ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ. ಅಲ್ಲದೇ ಶಾಸಕರಾಗಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸನ್ನಡೆತೆ ಹೊಂದಿದ್ದಾರೆ. ಮಾಡಿರುವ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಲಾಗುತಿದೆ ಎಂದು ತಿಳಿಸಿದೆ.
ಷರತ್ತುಬದ್ಧ ಜಾಮೀನು: ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, 50 ಸಾವಿರ ರೂ. ವೈಯಕ್ತಿಕ ಬಾಂಡ್, ಒಂದು ಶೂರಿಟಿ ಒದಗಿಸಬೇಕು. ಶಾಂತಿ ಕಾಪಾಡಬೇಕು. ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಬಾರದು. ನ್ಯಾಯಾಲಯದ ಅನುಮತಿ ಇಲ್ಲದೆ ವಿದೇಶ ಪ್ರಯಾಣ ಮಾಡಬಾರದು. ಒಂದು ವರ್ಷಗಳ ಕಾಲ ನ್ಯಾಯಾಲಯದ ಮೇಲ್ವಿಚಾರಣೆಗೊಳಪಟ್ಟಿದ್ದು, ಮೂರು ತಿಂಗಳಿಗೊಮ್ಮೆ ನ್ಯಾಯಾಲಯದ ಮುಂದೆ ಹಾಜರಾಗಿ ಷರತ್ತುಗಳನ್ನು ಉಲ್ಲಂಘನೆ ಮಾಡಿಲ್ಲ ಎಂಬುದಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನ್ಯಾಯಾಲಯವು ತಿಳಿಸಿದೆ.
ಇದನ್ನೂ ಓದಿ: ಹಕ್ಕು ಪತ್ರಕ್ಕಾಗಿ ಹೋರಾಟ.. ಮೈಸೂರು ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಿದ ಪ್ರತಿಭಟನಾಕಾರರು