ಬೆಂಗಳೂರು: ಪುಸ್ತಕ ಖರೀದಿ ಹಗರಣದ ಬಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ.
ಶಾಸಕರು ತಮ್ಮ ವಕೀಲರ ಮೂಲಕ ನ್ಯಾಯಾಧೀಶರಾದ ರಾಮಚಂದ್ರ ಡಿ ಹುದ್ದಾರ ಅವರಿಗೆ ಮಾಹಿತಿ ನೀಡಿದರು. ಕೂಡಲೇ ನ್ಯಾಯಾಧೀಶರು ಸಿವಿಲ್ ಕೋರ್ಟ್ನಲ್ಲಿರುವ ಸರ್ಕಾರಿ ವೈದ್ಯರನ್ನು ಕರೆಸಿ ಕೋರ್ಟ್ ಹಾಲ್ನಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು.
ಶಿವನಗೌಡ ನಾಯಕ್ ಅವರ ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು, ಬಿ.ಪಿ ನಾರ್ಮಲ್ ಆಗಿದೆ ಎಂದು ನ್ಯಾಯಾಧೀಶರಿಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್ ರಾಮಚಂದ್ರ ಡಿ ಹುದ್ದಾರ್, ಕೋರ್ಟ್ಗೆ ಬಂದಾಗ ಈ ರೀತಿ ಆಗಬಾರದು. ಒಮ್ಮೆ ಇಸಿಜಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. 2008ರಲ್ಲಿ ಶಿವನಗೌಡ ನಾಯಕ್ ಅವರು ಗ್ರಂಥಾಲಯ ಸಚಿವರಾಗಿದ್ದಾಗ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಲೋಕಾಯುಕ್ತ ಪೊಲೀಸರು ಕೇಸ್ ದಾಖಲಿಸಿದ್ದರು.