ಬೆಂಗಳೂರು: ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ಗೆ ಇಂದು ತಮ್ಮ ಬಾಹ್ಯ ಬೆಂಬಲ ಘೋಷಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ಘೋಷಿಸಿದರು. ಅವರಿಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಪಕ್ಷದ ಬಾವುಟ ನೀಡಿ ಸಹ ಸದಸ್ಯರ ಪ್ರಮಾಣ ಪತ್ರ ನೀಡಿ ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು.
ಓದಿ: ತೈಲ ಬೆಲೆ ಏರಿಕೆ ಸೇರಿದಂತೆ ಎಲ್ಲವನ್ನೂ ಪ್ರಧಾನಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ: ವಿ.ಸೋಮಣ್ಣ
ಮುಂಬರುವ ದಿನಗಳಲ್ಲಿ ಎದುರಾಗುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆಲ್ಲುವ ಹಾಗೂ ನಮಗೊಂದು ಅಧಿಕೃತ ಗುರುತು ಪಡೆಯುವ ಸಲುವಾಗಿ ಶರತ್ ಬಚ್ಚೇಗೌಡ ಕಾಂಗ್ರೆಸ್ಗೆ ಇಂದು ತಮ್ಮ ಭಾಷೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಧಿಕೃತ ಸೇರ್ಪಡೆಗೆ ಸಾಕಷ್ಟು ತಾಂತ್ರಿಕ ತೊಡಕುಗಳು ಎದುರಾಗಲಿವೆ. ಮುಂಬರುವ ದಿನಗಳಲ್ಲಿ ತಮ್ಮ ಆಯ್ಕೆ ಮುಕ್ತ ವಾಗಿರಲಿ ಎಂಬ ಉದ್ದೇಶಕ್ಕೆ ಅವರು ಇಂದು ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆ ಆಗಲಿಲ್ಲ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಇದೊಂದು ಸಂಭ್ರಮ. ನಿಮ್ಮಿಂದ ಬಹಳ ನಿರೀಕ್ಷೆ ಇದೆ. ನಿಮಗಾಗಿ ನಾವು ಸಹಕಾರ ನೀಡಲು ಸಿದ್ಧವಾಗಿದ್ದೇವೆ. ಇದು ಕಾಂಗ್ರೆಸ್ ಸಭೆ ಅಲ್ಲ, ಶಾಸಕಾಂಗ ಸಭೆ. ನಿಮ್ಮ ಕ್ಷೇತ್ರದ ರಾಜಕೀಯ ಬದಲಾವಣೆ ಹಿನ್ನೆಲೆಯಲ್ಲಿ ನಮಗೆ ಬೆಂಬಲಿಸಿದ್ದೀರಿ. ನಿಮ್ಮನ್ನು ಬೆಂಬಲಿಸಲು ನಾವು ಸಹ ಸಿದ್ಧವಿದ್ದೇವೆ. ನಿಮ್ಮ ಏಳ್ಗೆ, ಅಭಿವೃದ್ಧಿಗೆ ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ. ಕ್ಷೇತ್ರದ ಯಾವುದೇ ಬೇಡಿಕೆ ಇದ್ದರೂ ಸರ್ಕಾರದ ಗಮನಕ್ಕೆ ತರೋಣ ಎಂದರು.
ಅಪೀಲು ಮಾಡಿದ ಶರತ್:
ಕಾಂಗ್ರೆಸ್ಗೆ ಬೆಂಬಲ ಸೂಚಿಸಿ ಬಳಿಕ ಶರತ್ ಬಚ್ಚೇಗೌಡ ಮಾತನಾಡಿ, ಜನರ ಒಲವು ಸಿಕ್ಕರೆ ಮಾತ್ರ ರಾಜಕಾರಣಿ, ಶಾಸಕ ಆಗಲು ಸಾಧ್ಯ. ನನ್ನ ಸ್ವಾರ್ಥ, ಹಿತ, ಬೆಳವಣಿಗೆ ಬಗ್ಗೆ ಶಾಸಕರು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ನನ್ನ ನಿರ್ಧಾರ ಮತದಾರರ ನಿರ್ಧಾರವಾಗಿದೆ. ನಾನು ವಿಧಾನಸಭೆಯಲ್ಲಿ ಪಕ್ಷೇತರ ಶಾಸಕನಾಗಿಯೇ ಇರುತ್ತೇನೆ. ಅಭಿವೃದ್ಧಿ ರಾಜ್ಯದ ಭಾಗವಾಗಿದೆ. ಆಯ್ಕೆಯಾದ ದಿನದಿಂದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ನನ್ನ ಕ್ಷೇತ್ರದ ಜನರ ಅಭಿವೃದ್ಧಿ, ಹಿತಕ್ಕಾಗಿ ಕಾಂಗ್ರೆಸ್ ಪಕ್ಷದ ಬೆಂಬಲ ಕೋರುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುತ್ತಿದ್ದೇನೆ. ನನ್ನ ಜೊತೆ ಜನರ ಬೆಂಬಲ ಇದ್ದು, ಕಾಂಗ್ರೆಸ್ ಪಕ್ಷದ ಸಹಕಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತೇನೆ ಎಂದರು.
ಈ ಅವಧಿ ನಂತರ ಸೇರ್ಪಡೆ ಆಗಬಹುದು:
ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬೇರೆ ಸ್ಥಳದಲ್ಲಿ ಸ್ಥಳಾವಕಾಶದ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಇಲ್ಲಿ ಸಮಾರಂಭ ಆಯೋಜನೆ ಮಾಡಲಾಗಿದೆ. ಪಕ್ಷೇತರರಾಗಿ ಗೆದ್ದವರು ಅವಧಿ ಮುಗಿಯುವವರೆಗೂ ಪಕ್ಷೇತರರಾಗಿಯೇ ಉಳಿಯಬೇಕು. ಪಕ್ಷಕ್ಕೆ ಸೇರಿದರೆ ಪಕ್ಷಾಂತರ ನಿಷೇಧ ಕಾಯ್ದೆಗೆ ತೊಡಕಾಗಲಿದೆ. ಈ ಅವಧಿ ನಂತರ ಸೇರ್ಪಡೆ ಆಗಬಹುದು. ಅಲ್ಲಿಯವರೆಗೂ ಬಾಹ್ಯ ಬೆಂಬಲ ಕೊಡಬಹುದು. ವಿಷಯಾಧಾರಿತ ಹೋರಾಟ, ಸರ್ಕಾರದ ವಿರುದ್ಧ ನಮ್ಮ ಹೋರಾಟದ ಸಂದರ್ಭದಲ್ಲಿ ಶರತ್ ಬಚ್ಚೇಗೌಡ ನಮ್ಮನ್ನು ಬೆಂಬಲಿಸಬಹುದು. ಅಧಿಕೃತ ಪ್ರತಿಪಕ್ಷವಾಗಿ, ಪ್ರತಿಪಕ್ಷ ನಾಯಕನಾಗಿ ನಾನು ನಿರ್ಧರಿಸಿದ್ದೇನೆ. ಅವರು ನಮಗೆ ಬೆಂಬಲಿಸಿದ್ದಾರೆ, ನಾನು ಅವರನ್ನು ಬೆಂಬಲ ಸ್ವೀಕರಿಸಿದ್ದೇನೆ ಎಂದರು.
ಪಕ್ಷೇತರನಾಗಿ ಏಕಾಂಗಿ ಹೋರಾಟ ಮಾಡುವ ಬದಲು ನಮ್ಮ ಬೆಂಬಲ ಕೋರಿದ್ದಾರೆ. ಎಲ್ಲಾ ರೀತಿಯ ರಾಜಕೀಯ ಬೆಂಬಲ ನೀಡಲು ನಮ್ಮ ಪಕ್ಷ ಸಿದ್ಧವಿದೆ. ಇಂದು ಬಿಜೆಪಿ ಸರ್ಕಾರ ಇದೆ. ಇವರ ಜನವಿರೋಧಿ ನೀತಿಯನ್ನು ನಾವು ವಿರೋಧಿಸುತ್ತೇವೆ. ಅದಕ್ಕೆ ಶರತ್ ಬೆಂಬಲ ನೀಡಬೇಕಿದೆ. ರಾಜ್ಯದಲ್ಲಿ ಸತ್ತ ಸರ್ಕಾರ ಇದೆ. ಇದರಿಂದ ಯಾವ ಅಭಿವೃದ್ಧಿ ಸಾಧ್ಯವಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಅಭಿವೃದ್ಧಿ ಆಗಿಲ್ಲ ಎನ್ನುತ್ತಿದ್ದಾರೆ. 36 ಸಾವಿರ ಕೋಟಿ ಕೊರೊನಾಗೆ ಸಾಲ ಮಾಡಿದ್ದಾರೆ. 6-7 ಸಾವಿರ ಕೋಟಿ ಖರ್ಚು ಮಾಡಿದ್ದಾರೆ ಎಂದು ಗುಡುಗಿದರು.
ಯಡಿಯೂರಪ್ಪ ನಿಂತೋಗಿರೋ ಡಕೊಟಾ ಬಸ್ನಲ್ಲಿ ಕೂತಿದ್ದಾರೆ. ಇಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ನನ್ನ ಬದುಕಲ್ಲಿ ಇಂತಹ ಭ್ರಷ್ಟ ಸರ್ಕಾರ ಕಂಡಿರಲಿಲ್ಲ. ಇದನ್ನು ಕಿತ್ತೊಗೆಯಬೇಕು. ಅದಕ್ಕೆ ಶರತ್ ಬಚ್ಚೇಗೌಡ ಬೆಂಬಲ ನೀಡಬೇಕು. ಎಂಟಿಬಿ ನಾಗರಾಜ್ ಹಿಂಬಾಗಿಲಿನಿಂದ ಬಂದು ಸಚಿವರಾಗಿ ಬಿಟ್ಟಿದ್ದಾರೆ. ಆದರೆ, ಕ್ಷೇತ್ರದಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗಿದೆ. ಇದರಿಂದ ನಮ್ಮ ಬೆಂಬಲ ಬೇಕೆಂಬ ಮನವರಿಕೆ ಆಗಿದೆ. ಶರತ್ ಬಚ್ಚೇಗೌಡ ಬಿಜೆಪಿ ವಿರೋಧಿ. ಇದರಿಂದ ನಮ್ಮ ಜೊತೆ ಕೈ ಜೋಡಿಸುತ್ತಾರೆ. ಅವರ ಜೊತೆ ನಾವು ನಿಲ್ಲುತ್ತೇವೆ. ಅವರ ನಿರ್ಧಾರ ಸ್ವಾಗತಿಸುತ್ತೇನೆ ಎಂದರು.
ಸಮಾರಂಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೃಷ್ಣಭೈರೇಗೌಡ, ಜಮೀರ್ ಅಹ್ಮದ್, ಸಲೀಂ ಅಹ್ಮದ್, ಕೆ.ಜೆ.ಜಾರ್ಜ್, ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ನಸೀರ್ ಅಹ್ಮದ್, ನಾರಾಯಣಸ್ವಾಮಿ, ತುಕಾರಾಂ, ರವಿ, ಭೈರತಿ ಸುರೇಶ್ ಸೇರಿ ಹಲವರು ಭಾಗಿಯಾಗಿದ್ದರು.