ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಯ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋವೊಂದು ವೈರಲ್ ಆಗಿದೆ. ಇಬ್ಬರ ನಡುವೆ ನಡೆಯುವ ಆಡಿಯೋ ಸಂಭಾಷಣೆ ಇದಾಗಿದೆ. ಸದ್ಯ ಬಂಧಿತನಾಗಿರುವ ಆರೋಪಿಯೊಬ್ಬನ ಬಗ್ಗೆ ಈ ಆಡಿಯೋದಲ್ಲಿದೆ. ಹಣದ ವ್ಯವಹಾರ ನಡೆದಿರುವ ಬಗ್ಗೆಯೂ ಆಡಿಯೋ ಸಂಭಾಷಣೆಯಲ್ಲಿದೆ.
ಇನ್ನು, ಈ ಮಾಹಿತಿಯನ್ನ ಆರೋಪಿಗೆ ಜಗದೀಶ್ ಎಂಬಾತ ಹೇಳಿದ್ದಾನೆ ಎಂದಿದ್ದು, ಈ ಜಗದೀಶ್ ಯಾರು ಎಂಬುದರ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆದರೆ, ಇದುವರೆಗಿನ ತನಿಖೆಯಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಹೆಸರು ಎಲ್ಲೂ ಬಾರದ ಕಾರಣ ಪೊಲೀಸರು ಇದುವರೆಗೂ ನಾಗನ ವಿಚಾರಣೆಗೆ ಮುಂದಾಗಿಲ್ಲ. ಒಂದು ವೇಳೆ ವಿಲ್ಸನ್ ಗಾರ್ಡನ್ ನಾಗ ಸುಪಾರಿ ನೀಡಿರುವುದಕ್ಕೆ ಸಾಕ್ಷ್ಯ ದೊರೆತರೆ ಬಂಧಿಸಲು ಸಿದ್ಧವಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ಆರೋಪ: ಇಬ್ಬರು ಆರೋಪಿಗಳ ಬಂಧನ
ಹತ್ಯೆಗೆ ಸಂಚು ನಡೆಸಿರುವ ಆರೋಪದಡಿ ಬೊಮ್ಮನಹಳ್ಳಿ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಸಕರ ಆಪ್ತ ಸಹಾಯಕ ಹರೀಶ್ ಬಾಬು ನೀಡಿದ ದೂರಿನನ್ವಯ ಎನ್.ಸಿ. ಆರ್ ದಾಖಲಿಸಿದ್ದ ಪೊಲೀಸರು, ಬಳಿಕ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿ, ಇಬ್ಬರನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ.
ಸುಪಾರಿ ಹಿಂದೆ ರಾಜಕೀಯ ದುರುದ್ದೇಶವೇ ಇದೆ. ನಾನು ಯಾರಿಗೂ ದ್ರೋಹ ಮಾಡಿಲ್ಲ. ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಆದರೆ, ಸುಪಾರಿ ಬಗ್ಗೆ ಮಾತಾಡಿರುವವರ ಆಡಿಯೋ ಪೊಲೀಸರಿಗೆ ಸಿಕ್ಕಿದೆ. ಅಲ್ಲದೇ, ನಾನು ಯಾರ ಮೇಲೆಯೂ ಆರೋಪ ಮಾಡುವುದಿಲ್ಲ. ಯಾವುದೇ ರಾಜಕೀಯ ಪಕ್ಷದ ಮೇಲೂ ಆರೋಪ ಮಾಡಲ್ಲ. ಆದರೆ, ಪಾರದರ್ಶಕ ತನಿಖೆ ಆಗಲಿ ಎಂದು ಶಾಸಕ ಸತೀಶ್ ರೆಡ್ಡಿ ಇತ್ತೀಚೆಗೆ ವಿಧಾನಸೌಧದಲ್ಲಿ ಮಾಧ್ಯಮದವರ ಮುಂದೆ ಒತ್ತಾಯ ಮಾಡಿದ್ದರು. ಅಲ್ಲದೇ ಇದರ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ ಎಂದು ಸಹ ಹೇಳಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ನಂತರ ಈ ಬಗ್ಗೆ ಮಾಹಿತಿ ಹೊರಬರಲಿದೆ. ವಿಚಾರಣೆ ತನಿಖಾ ಹಂತದಲ್ಲಿ ಇರುವುದರಿಂದ ಹೆಚ್ಚು ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಶಾಸಕರಿಗೆ ಯಾವುದೇ ಬೆದರಿಕೆ ಇದ್ದರೂ ಸಹ ಅವರಿಗೆ ರಕ್ಷಣೆ ಕೊಡುವ ಕೆಲಸವನ್ನು ನಮ್ಮ ಪೊಲೀಸರು ಮಾಡುತ್ತಾರೆ. ನಾನು ಈಗಾಗಲೇ ನಮ್ಮ ಹಿರಿಯ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ, ಅವರಿಗೆ ಭದ್ರತೆ ಕೊಡುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಅಂದು ಪ್ರತಿಕ್ರಿಯೆ ನೀಡಿದ್ದರು.
ಸದ್ಯ ಶಾಸಕರ ಹತ್ಯೆಗೆ ಪ್ಲಾನ್ ಪ್ರಕರಣ ಸಂಬಂಧ ಬೆಂಗಳೂರಿನ ಬೊಮ್ಮನಹಳ್ಳಿ ಠಾಣೆ ಪೊಲೀಸರು ಈಗಾಗಲೇ ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮೋದಿ ಕೈಕೆಳಗೆ ಕೆಲಸ ಮಾಡಲು ಖುಷಿ ಇದೆ, ರಾಜ್ಯ ರಾಜಕಾರಣದತ್ತ ಬರೋಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ