ಬೆಂಗಳೂರು: ಯಡಿಯೂರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ನಿಮಗೇನಿದೆ?, ನೀವೇನು ಪಕ್ಷ ಕಟ್ಟಿದ್ದೀರಾ ? ಒರಿಜಿನಲ್ ಬಿಜೆಪಿಗರಾ?, ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸುವುದು ನೀವಲ್ಲ, ನಮ್ಮ ಪಕ್ಷದ ವರಿಷ್ಠರು, ನಾವೆಲ್ಲಾ ಶಾಸಕರು ಸೇರಿ ಆಯ್ಕೆ ಮಾಡುವುದು ಎಂದು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಸಿಎಂ ಅಧಿಕೃತ ನಿವಾದ ಕಾವೇರಿಗೆ ಬಿಎಎಸ್ವೈ ಬೆಂಬಲಿಗರಾದ ರೇಣುಕಾಚಾರ್ಯ, ಎಸ್.ಆರ್.ವಿಶ್ವನಾಥ್, ಹರತಾಳು ಹಾಲಪ್ಪ, ಎಂ.ಪಿ ಕುಮಾರಸ್ವಾಮಿ ಹಾಗು ಇತರ ಶಾಸಕರು ಭೇಟಿ ನೀಡಿದರು. ಯಡಿಯೂರಪ್ಪನವರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಯಡಿಯೂರಪ್ಪ ಅವರ ಬಗ್ಗೆ ಹೆಚ್.ವಿಶ್ವನಾಥ್ ಹೇಳಿಕೆಗೆ ಸಿಎಂ ಎದುರಲ್ಲೇ ಶಾಕರು ಕಿಡಿಕಾರಿದ್ದಾರೆ. ಈ ವೇಳೆ ಸ್ವತಃ ಸಿಎಂ ಶಾಸಕರನ್ನು ಸಮಾಧಾನಪಡಿಸಿದರು ಎನ್ನಲಾಗಿದೆ.
ಸಿಎಂ ಭೇಟಿ ನಂತರ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದರೂ, ಅವರ ಮನಸ್ಸು ಯುವಕರಂತಿದೆ. ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ನೀವು ಕಾಂಗ್ರೆಸ್ನಲ್ಲಿ ಸಚಿವರಾಗಿದ್ದಾಗ ಎಸ್.ಎಂ ಕೃಷ್ಣ ವಿರುದ್ಧ ಏನು ಆರೋಪ ಮಾಡಿದ್ದೀರಿ?, ಸಿದ್ದರಾಮಯ್ಯ ವಿರುದ್ದ ಏನು ಮಾತನಾಡಿದ್ದೀರಿ?, ಎಲ್ಲಾ ಸ್ಥಾನಮಾನ ಕೊಟ್ಟರೂ ಕಾಂಗ್ರೆಸ್ನಿಂದ ಹೊರಗೆ ಬಂದಿದ್ದೀರಿ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೂ, ದೇವೇಗೌಡರಿಗೆ ಮೋಸ ಮಾಡಿ ಬಿಜೆಪಿಗೆ ಬಂದಿದ್ದೀರಿ. ಈಗ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ವಿರುದ್ಧ ಮಾತನಾಡುತ್ತಿದ್ದೀರಾ ಎಂದು ಹೆಚ್.ವಿಶ್ವನಾಥ್ ಅವರನ್ನು ಪ್ರಶ್ನಿಸಿದರು.
ರಾಜೀನಾಮೆ ಕೊಟ್ಟು ಬಂದಾಗ ಉಪಚುನಾವಣೆಯಲ್ಲಿ ನಿಲ್ಲಬೇಡಿ ನಿಮ್ಮ ವಿರುದ್ಧ ಅಲೆ ಇದೆ, ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುತ್ತೇವೆ ಎಂದು ಹೇಳಿದರೂ ಕೇಳದೆ ಚುನಾವಣೆಯಲ್ಲಿ ನಿಂತು ಸೋತಿರಿ. ಸೋತರೂ ಪರಿಷತ್ ಸದಸ್ಯರನ್ನಾಗಿ ಮಾಡಿದರು. ಆದರೆ, ನ್ಯಾಯಾಲಯದ ಆದೇಶ ನಿಮ್ಮ ವಿರುದ್ಧ ಇದ್ದ ಕಾರಣ ಸಚಿವ ಸ್ಥಾನ ನೀಡಲಾಗಲಿಲ್ಲ. ಸಚಿವ ಸ್ಥಾನ ನೀಡಲಿಲ್ಲ ಎಂದು ನೀವು ಹತಾಶೆಯಿಂದ ಯಡಿಯೂರಪ್ಪ ವಿರುದ್ಧ ಮಾತನಾಡುವುದು ಸರಿಯಲ್ಲ.
ನೀವು ಮೂಲ ಬಿಜೆಪಿಗರಾ? ಪಕ್ಷದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ನಿಮಗೆ ಇಲ್ಲ. ಯಡಿಯೂರಪ್ಪ ಪಕ್ಷ ಕಟ್ಟಿ ಬೆಳೆಸಿದ್ದಾರೆ. ನೀವು ಯಾವ ಪಕ್ಷವನ್ನು ಕಟ್ಟಿದ್ದೀರಿ? ಯಾವ ಪಕ್ಷದಲ್ಲಿ ಇರುತ್ತಿರೋ ಆ ಪಕ್ಷದ ವಿರುದ್ಧ ಮಾತನಾಡುತ್ತೀರಿ, ಎಸ್.ಎಂ ಕೃಷ್ಣ, ಸಿದ್ದರಾಮಯ್ಯ ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಮಾತನಾಡಿದ್ದೀರಿ. ಈಗ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದೀರಿ.
ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧಾರ ಮಾಡುವುದು ಶಾಸಕರು, ಪರಿಷತ್ ಸದಸ್ಯರಲ್ಲ. ಯಡಿಯೂರಪ್ಪನವರ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕ ಹಕ್ಕಿದೆ? ಈ ಇಳಿವಯಸ್ಸಿನಲ್ಲಿಯೂ ಅವರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಎಂದು ಹಳ್ಳಿಹಕ್ಕಿಯನ್ನು ಕುಟುಕಿದರು.
ಮೂರ್ನಾಲ್ಕು ಜನ ಅಪಸ್ವರ ಎತ್ತಿದ್ದಾರೆ, ಅಷ್ಟಕ್ಕೆ ಪಂಚಮಸಾಲಿಯವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುತ್ತಿದ್ದೀರಲ್ಲ. ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ನೀವಲ್ಲ, ಅದನ್ನು ರಾಷ್ಟ್ರೀಯ ನಾಯಕರು ಮತ್ತು ನಾವು ಶಾಸಕರು ನಿರ್ಧಾರ ಮಾಡುತ್ತೇವೆ. ಪ್ರಸ್ತುತ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ. ಈ ಅಪಪ್ರಚಾರ ನಿಲ್ಲಿಸಬೇಕು ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಕನ ಕನಸು ಕಾಣುತ್ತಿದ್ದಾರೆ. ಹಿಂದೆ ಅವರು ನನಗೆ ಆಫರ್ ಒಂದು ಮಾಡಿದ್ದರು. ನೀನು ಸೈಲೆಂಟಾಗಿ ಇರು, ನಿನ್ನನ್ನು ಹೋಮ್ ಮಿನಿಸ್ಟರ್ ಮಾಡ್ತೀನಿ ಅಂದಿದ್ದರು. ನಾನು ಹೇಳ್ತಿರೋದು ಸತ್ಯ, ಯತ್ನಾಳ್ ಅವರು ತಿರುಕನ ಕನಸು ಕಾಣುತ್ತಿದ್ದಾರೆ. ಅದು ಯಾವುದೇ ಕಾರಣಕ್ಕೂ ನನಸಾಗಲ್ಲ. ಸೂಟು ಬೂಟು ಹೊಲಿಸಿಕೊಂಡು ರೆಡಿಯಾಗಿದ್ದಾರೆ, ವಿಶ್ವನಾಥ್ ಕೂಡ ಅದೇ ರೀತಿ ಸಿದ್ದರಾಗಿದ್ದಾರೆ. ಅದಕ್ಕೆ, ಹೀಗೆಲ್ಲಾ ಆಡುತ್ತಿದ್ದಾರೆ ಎಂದು ಯತ್ನಾಳ್ ಹಾಗೂ ವಿಶ್ವನಾಥ್ ವಿರುದ್ದ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
'ವಿಶ್ವನಾಥ್ ಒಬ್ಬ ಮಾನಸಿಕ ಅಸ್ವಸ್ಥ'
ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಮಾತನಾಡಿ, ಹೆಚ್. ವಿಶ್ವನಾಥ್ ಒಬ್ಬ ಮಾನಸಿಕ ಅಸ್ವಸ್ಥ. ಅವರನ್ನು ಮೊದಲು ಆಸ್ಪತ್ರೆಗೆ ಸೇರಿಸಬೇಕು. ಉಂಡ ಮನೆಗೆ ಎರಡು ಬಗೆಯುವ ಬುದ್ದಿ ಅವರದ್ದು. ರೋಡಲ್ಲಿ ಓಡಾಡುವ ಅರೆ ಹುಚ್ಚರ ರೀತಿ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಉಂಡ ಮನೆಗೆ ದ್ರೋಹ ಬಗೆಯುವುದು ವಿಶ್ವನಾಥ್ ಅವರ ಗುಣ. ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿ ತಪಾಸಣೆ ಮಾಡಿಸಬೇಕು ಎಂದು ಮನವಿ ಮಾಡುತ್ತೇನೆ. ಅವರು ಏನು ಮಾತಾಡುತ್ತಿದ್ದಾರೆ ಎಂಬ ಅರಿವು ಅವರಿಗೆ ಇಲ್ಲ. ಯಡಿಯೂರಪ್ಪನವರಿಗೆ ವಯಸ್ಸು ಆಗಿರಬಹುದು. ಆದರೆ ಅವರ ಮಾನಸಿಕ ನಿರ್ಧಾರಗಳು ಧೃಡವಾಗಿವೆ.
ಬಿಜೆಪಿಗೆ ಒಬ್ಬರೇ ವಿಶ್ವನಾಥ್ ಸಾಕಾಗಿತ್ತು, ಆದರೆ ಏನ್ ಮಾಡೋದು ಬೇರೆಯವರ ಜೊತೆ ಬಂದಾಗ ಬೇಡ ಅನ್ನೋದಕ್ಕೆ ಆಗೋದಿಲ್ಲ. ಹೀಗಾಗಿ, ಅವರನ್ನು ಪಕ್ಷಕ್ಕೆ ಕರೆದುಕೊಂಡು ತಪ್ಪು ಮಾಡಿದ್ದೇವೆ ಎಂದು ಎಸ್. ಆರ್ ವಿಶ್ವನಾಥ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ವಿಶ್ವನಾಥ್ಗೆ ಅರಳು ಮರಳು ಆಗಿದೆ. ಅವರ ಮನಸ್ಥಿತಿಯೇ ಸರಿ ಇಲ್ಲ. ಅವರಿಗೆ ಒಂದು ಗುಣ ಇದೆ, ಇದ್ದ ಮನೆಯಲ್ಲಿ ಮದ್ದರೆಯೋದು. ನಿಜವಾಗಿಯೂ ಇವರದ್ದು ಹುಚ್ಚಾಟ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ: ಅರುಣ್ ಸಿಂಗ್ ಮುಂದೆ ಹೆಚ್.ವಿಶ್ವನಾಥ್ ಹೇಳಿದ್ದೇನು?