ಬೆಂಗಳೂರು: ಹೆಚ್.ಡಿ. ರೇವಣ್ಣ ಕೈಯಲ್ಲಿ ಆಗಿಲ್ಲ ಅಂತ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರಯತ್ನದಲ್ಲಿ ಹಾಸನದಲ್ಲಿ ವಿಮಾನ ನಿಲ್ದಾಣ ಆಗುತ್ತಿದೆ ಎಂದು ಹಾಸನ ಶಾಸಕ ಪ್ರೀತಂ ಗೌಡ ತಿಳಿಸಿದರು.
ಶಕ್ತಿ ಭವನದಲ್ಲಿ ಹಾಸನ ವಿಮಾನ ನಿಲ್ದಾಣ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹಾಸನ ವಿಮಾನ ನಿಲ್ದಾಣ ಸಿಎಂ ಅವರ ದಿಟ್ಟ ನಿರ್ಧಾರದಿಂದ ಆಗಿದೆ. ಈ ವಿಚಾರದಲ್ಲಿ ಪ್ರೀತಂ ಗೌಡ ಆಗಲಿ, ಹೆಚ್.ಡಿ. ರೇವಣ್ಣ ಆಗಲಿ ನಗಣ್ಯ. ಹಾಸನದ ಮೇಲೆ ಸಿಎಂಗೆ ವಿಶೇಷ ಕಾಳಜಿ ಇದೆ. ಸಿಎಂ ಅವರ ಪ್ರಯತ್ನದ ಫಲವೇ ಹಾಸನ ವಿಮಾನ ನಿಲ್ದಾಣ. ಇದರ ಹಿಂದೆ ಸಿಎಂ ಇದ್ದಾರೆ. ನಾನು ಸಿಎಂ ಪ್ರತಿನಿಧಿ, ಹಾಗಾಗಿ ಇದರ ಕ್ರೆಡಿಟ್ ನನಗೆ ಸಲ್ಲುತ್ತದೆ. ಇದರಲ್ಲಿ ಕ್ರೆಡಿಟ್ ಪಡೆಯಲು ರೇವಣ್ಣ ಮುಂದಾದ್ರೆ, ಅವರಿಗೂ ಸ್ವಲ್ಪ ಕ್ರೆಡಿಟ್ ಸಲ್ಲಲಿ. ರೇವಣ್ಣ ಕಾಲದಲ್ಲಿ ಈ ಪ್ರಯತ್ನ ಕೈಗೂಡಲಿಲ್ಲ ಎಂದರು.
ವಿಮಾನ ನಿಲ್ದಾಣ ಮಾಡಲು ರೇವಣ್ಣ ಪ್ರಯತ್ನ ಪಟ್ಟಿದ್ರು ಅಂತಾದ್ರೂ ಕ್ರೆಡಿಟ್ ಹೋಗಲಿ. ಮಾಜಿ ಪ್ರಧಾನಿ ದೇವೇಗೌಡರೂ ಈ ಸಂಬಂಧ ಸಲಹೆ ಕೊಟ್ಟಿದ್ದರು. ದೇವೇಗೌಡರ ಸಲಹೆ ಮೇರೆಗೆ ನಾನು ಸಿಎಂಗೆ ಮನವಿ ಮಾಡಿದ್ದೆ. ದೇವೇಗೌಡರ ವಿಚಾರದಲ್ಲಿ ನಾನು ರಾಜಕಾರಣ ಮಾಡಲ್ಲ. ಉಳಿದಂತೆ ರೇವಣ್ಣ ಆಗಲಿ, ಸಂಸದ ಪ್ರಜ್ವಲ್ ರೇವಣ್ಣ ಆಗಲಿ ರಾಜಕಾರಣ ಮಾಡ್ತಿದಾರೆ. ಅವರ ರಾಜಕಾರಣ ಎದುರಿಸುವ ಶಕ್ತಿ ನನಗೆ ದೇವರು ಕೊಟ್ಟಿದ್ದಾನೆ ಎಂದು ತಿರುಗೇಟು ನೀಡಿದರು.
ಸಿಎಂ ಬಿಎಸ್ವೈ 224 ಕ್ಷೇತ್ರಗಳನ್ನೂ ಸಮಾನವಾಗಿ ನೋಡ್ತಾರೆ. ವಿರೋಧಪಕ್ಷ, ಆಡಳಿತ ಪಕ್ಷ ಅಂತ ರಾಜಕೀಯವಾಗಿ ಮಾತ್ರ ನೋಡಬೇಕು. ಆಡಳಿತದಲ್ಲಿ ಎಲ್ಲರನ್ನೂ ಸಮಾನವಾಗಿ ನೋಡಬೇಕು. ನಮ್ಮ ಜಿಲ್ಲೆಯಲ್ಲಿ ಯಾವುದೇ ತೊಂದ್ರೆ ಆಗಿಲ್ಲ. ಯಾರೇ ತೊಂದ್ರೆ ಮಾಡಲು ಬಂದ್ರೂ ವಿಘ್ನ ನಿವಾರಕ ನನ್ನ ಜೊತೆ ಇದ್ದಾನೆ. ವಿಘ್ನಗಳನ್ನು ನಿವಾರಿಸುವ ಶಕ್ತಿ ಭಗವಂತ ನನಗೆ ಕೊಟ್ಟಿದ್ದಾನೆ. ಅನುದಾನವನ್ನು ವಿಪಕ್ಷದವರಿಗೂ ಕೊಡಬೇಕು. ಆಡಳಿತ ಪಕ್ಷದವರಿಗೂ ಕೊಡಬೇಕು. ಸಿಎಂ ನಿರ್ಧಾರಕ್ಕೆ ನಾವು ಬದ್ಧ ಎಂದು ಪ್ರೀತಂ ಗೌಡ ತಿಳಿಸಿದರು.