ಬೆಂಗಳೂರು: ನಾನು ರಾಜಕಾರಣ ಮಾಡುವುದಕ್ಕೆ ಇಲ್ಲಿಗೆ ಬಂದವನು. ಕಬ್ಬನ್ ಪಾರ್ಕ್, ಲಾಲ್ ಬಾಗ್ ನೋಡುವುದಕ್ಕೆ ಅಲ್ಲ. ಮಾತನಾಡಬೇಕಾದರೆ ಗೌರವ ಕೊಟ್ಟು, ಗೌರವ ಪಡೆಯಬೇಕು ಎಂದು ಶಾಸಕ ಪ್ರೀತಂ ಗೌಡ ಸ್ವಪಕ್ಷದ ಸಚಿವ ವಿ. ಸೋಮಣ್ಣ ಅವರಿಗೆ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ನಿಲುವು ಬದಲಾಗಿಲ್ಲ. ನಾನು ಪ್ರಶ್ನೆ ಮಾಡಿದ್ದು ನೂರಕ್ಕೆ ನೂರು ಸತ್ಯ. ಸೋಮಣ್ಣನವರು ಮೇಲೆ ಇದ್ದಾರೆ, ಅವರು ಬಂದ ಮೇಲೆ ಮತ್ತೊಮ್ಮೆ ಕೇಳಿ, ಮೊದಲು ಗೆದ್ದವರಿಗೆ ಒಂದೇ ವೋಟು, ಆರು ಬಾರಿ ಗೆದ್ದವರಿಗೂ ಒಂದೇ ವೋಟು ಎಂದರು.
ನಾನು ಮಂತ್ರಿ ಸ್ಥಾನ ಕೇಳಿಲ್ಲ : ನಾನು ಸಚಿವ ಸ್ಥಾನ ಕೇಳಿಲ್ಲ. ಕಾರ್ಯಕರ್ತರು ಏನು ಹೇಳಿದ್ದರೋ ಅದನ್ನೇ ಹೇಳಿದ್ದೇನೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ಅಲ್ಲಿಗೆ ಹೋಗಿದ್ದು ಸರಿಯೇ?. ಇದನ್ನು ನಮ್ಮ ಕಾರ್ಯಕರ್ತರು ಕೇಳುತ್ತಿದ್ದಾರೆ. ಅದನ್ನೇ ನಾನು ಪ್ರಶ್ನಿಸಿದೆ ಎಂದು ಬೊಮ್ಮಾಯಿ ದೇವೇಗೌಡ ಭೇಟಿ ಕುರಿತು ಸ್ಪಷ್ಟತೆ ನೀಡಿದರು.
ಕಾರ್ಯಕರ್ತರ ನೋವು ಹೇಳಿಕೊಂಡಿದ್ದೇನೆ: ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಭೇಟಿ ಮಾಡಿದ್ದೆ. ಕಾರ್ಯಕರ್ತರ ನೋವು ತಿಳಿಸಿಕೊಟ್ಟಿದ್ದೇನೆ. ಮುಖ್ಯಮಂತ್ರಿಗಳು ಹಾಗೂ ಸಚಿವ ಆರ್. ಅಶೋಕ್ ಅವರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಕುರಿತು ಮಾತು ಕೊಟ್ಟು, ಕಾರ್ಯಕರ್ತರಿಗೆ ನೋವಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಹಿರಿಯರ ಮಾತಿಗೆ ನಾನು ಒಪ್ಪುತ್ತೇನೆ. ವೈಯುಕ್ತಿಕ ಅಧಿಕಾರದ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.