ಬೆಂಗಳೂರು : ಔರಾದ್ಕರ್ ವರದಿಯನ್ನು ಅನುಷ್ಠಾನಗೊಳಿಸುವಂತೆ ಮಾಜಿ ಸಚಿವ ಎಂ ಬಿ ಪಾಟೀಲ್ ಆಗ್ರಹಿಸಿದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುವ ವೇಳೆ, ಪೊಲೀಸರ ವೇತನ ಪರಿಷ್ಕರಣೆ, ಇತರೆ ಸವಲತ್ತುಗಳ ಶಿಫಾರಸು ಇರುವ ವರದಿ ಇದಾಗಿದೆ.
ಔರಾದ್ಕರ್ ವರದಿ ಪಡೆದು ಸರ್ಕಾರ ಸುಮ್ಮನಾಗಿದೆ. ಔರಾದ್ಕರ್ ವರದಿ ಜಾರಿ ಮಾಡುವ ಕೆಲಸ ಇನ್ನೂ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರು 12 ಗಂಟೆ ಮೀರಿ ಕೆಲಸ ಮಾಡುತ್ತಾರೆ. ಹಬ್ಬ-ಹರಿದಿನಗಳಲ್ಲೂ ಕೆಲಸ ಮಾಡುತ್ತಾರೆ.
ಪೊಲೀಸರ ವೇತನದಲ್ಲೂ ತಾರತಮ್ಯ ಇದೆ. ಒಮ್ಮೆ ಔರಾದ್ಕರ್ ಅವರನ್ನು ಕರೆಸಿಕೊಂಡು ಸರ್ಕಾರ ಚರ್ಚಿಸಲಿ. ಪೊಲೀಸರಿಗೆ ಆಗಿರುವ ತಾರತಮ್ಯಗಳನ್ನು ಸರಿಪಡಿಸಿ. ಔರಾದ್ಕರ್ ವರದಿ ಬಗ್ಗೆ ಸರ್ಕಾರ ಒಂದು ನಿರ್ಣಯಕ್ಕೆ ಬರಲಿ. ಇದು ಬಹಳ ಗಂಭೀರವಾದ ವಿಷಯವಾಗಿದ್ದು, ಸರ್ಕಾರ ಗಮನಿಸಲಿ ಎಂದು ಆಗ್ರಹಿಸಿದರು.