ಬೆಂಗಳೂರು: ಸಚಿವ ಸ್ಥಾನ ಸಿಗದಿರುವುದಕ್ಕೆ ನನಗೆ ಬೇಸರವಿಲ್ಲ, ಭಿನ್ನಮತೀಯ ಚಟುವಟಿಕೆ ನಡೆಸಿಲ್ಲ. ಕೇವಲ ನೀರಾವರಿ ಯೋಜನೆ ಬಗ್ಗೆ ರೇಣುಕಾಚಾರ್ಯ ಜೊತೆ ಚರ್ಚೆ ನಡೆಸಿದ್ದೇನೆಂದು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸ್ಪಷ್ಟನೆ ನೀಡಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಅತೃಪ್ತ ಶಾಸಕರ ಸಭೆಯಲ್ಲಿ ಭಾಗಿಯಾಗಿದ್ದ ಕುರಿತು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದರು. ಈ ವೇಳೆ ಅತೃಪ್ತರ ಸಭೆಯಲ್ಲಿ ಭಾಗಿಯಾಗಿದ್ದ ಕುರಿತು ಸಿಎಂಗೆ ವಿವರಣೆ ನೀಡಿದರು. ಸಭೆ ನಡೆಸಿಲ್ಲ, ನೀರಾವರಿ ಯೋಜನೆ ಕುರಿತು ಚರ್ಚೆ ನಡೆಸಿದ್ದೇವೆ. ಸಂಪುಟ ಸಭೆ ಹೊನ್ನಾಳಿ ತಾಲ್ಲೂಕಿನ ನೀರಾವರಿ ಯೋಜನೆಗೆ ಅನುಮತಿ ನೀಡಿದ್ದಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಅಭಿನಂದಿಸಿ ಬಂದಿದ್ದೇವೆ.ಯಾವ ಕಾರಣಕ್ಕೂ ಪ್ರತ್ಯೇಕ ಸಭೆಯಂತಹ ಚಟುವಟಿಕೆಯಲ್ಲಿ ಭಾಗಿಯಾಗಲ್ಲ ಎಂದು ಸಿಎಂಗೆ ತಿಳಿಸಿದ್ದಾರೆ.
ಓದಿ: ಜಾರಕಿಹೊಳಿ ನಿವಾಸದಲ್ಲಿ ರೇಣುಕಾಚಾರ್ಯ & ಟೀಂ ಸಭೆ; ಭೋಜನ ಕೂಟದ ನೆಪದಲ್ಲಿ ಅತೃಪ್ತರ ಮೀಟಿಂಗ್?
ಮುಖ್ಯುಮಂತ್ರಿ ಭೇಟಿ ನಂತರ ಮಾತನಾಡಿದ ಮಾಡಾಳು ವಿರೂಪಾಕ್ಷಪ್ಪ, ನಿನ್ನೆಯಿಂದ ಕೆಲವು ಮಾಧ್ಯಮಗಳಲ್ಲಿ ನಾನು ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿದ್ದೇನೆಂದು ತೋರಿಸುತ್ತಿದ್ದಾರೆ. ಆದರೆ ನಾನು ಯಾವುದೇ ಭಿನ್ನಮತಿಯ ಚಟುವಟಿಕೆ ಮಾಡಿಲ್ಲ. ನೀರಾವರಿ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ಜೊತೆ ಮಾತನಾಡಿದ್ದೇನೆ ಎಂದರು. ಯಾರು ಕೂಡ ಭಿನ್ನಮತೀಯ ಚಟುವಟಿಕೆ, ಅಸಮಾಧಾನ ಹೊರ ಹಾಕಬಾರದು. ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು. ಸಚಿವ ಸ್ಥಾನ ಸಿಗುವವರೆಗೂ ಅದಕ್ಕಾಗಿ ಬೇಡಿಕೆ ಇಡುತ್ತಿದ್ದರು. ಈಗ ಸಚಿವ ಸ್ಥಾನ ಸಿಕ್ಕಿದೆ. ಇದೀಗ ಖಾತೆಗಾಗಿ ಅಸಮಾಧಾನ ಮಾಡೋದು ಸರಿಯಲ್ಲ. ಇದರಿಂದ ಪಕ್ಷ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ರೀತಿಯ ಭಿನ್ನಮತೀಯ ಚಟುವಟಿಕೆಗಳು, ಅಸಮಾಧಾನವನ್ನ ಯಾವುದೇ ಸಚಿವರು ಹೊರ ಹಾಕಬಾರದು. ಈ ರೀತಿ ಮುಂದುವರೆಸಿದ್ರೆ ಅಂತಹ ಸಚಿವರ ಮನೆ ಮುಂದೆ ನಾವುಗಳೇ ಧರಣಿ ಮಾಡಬೇಕಾಗುತ್ತದೆ ಎಂದು ಅಸಮಾಧಾನಿತ ಸಚಿವರಿಗೆ ವಿರೂಪಾಕ್ಷಪ್ಪ ಎಚ್ಚರಿಕೆ ನೀಡಿದರು.