ಬೆಂಗಳೂರು : ಕಾಂಗ್ರೆಸ್ ಪಾದಯಾತ್ರೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಎಂ ಪಿ ರೇಣುಕಾಚಾರ್ಯ ಅವರು, ಇದು ರಾಜಕೀಯ ಪ್ರೇರಿತ ಪಾದಯಾತ್ರೆ. ಇವರು ಜನರ ಅಭಿವೃದ್ಧಿ, ಹಿತದೃಷ್ಟಿಯಿಂದ ಪಾದಯತ್ರೆ ಮಾಡುತ್ತಿಲ್ಲ. ಇವರು ಅಧಿಕಾರದಲ್ಲಿದ್ದಾಗ ಏನ್ ಮಾಡಿದ್ದರು, ಡಿಕೆಶಿಯವರೇ ಎಷ್ಟು ವರ್ಷ ಸಚಿವರಾಗಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿಲ್ವಾ?. ನಿಮ್ಮ ಕಾಲದಲ್ಲಿ ಯಾಕೆ ಅನುಷ್ಠಾನಕ್ಕೆ ತರಲಿಲ್ಲ ಎಂದು ರೇಣುಕಾಚಾರ್ಯ ಕಾಂಗ್ರೆಸ್ ನಾಯಕರನ್ನ ಪ್ರಶ್ನಿಸಿದರು.
ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಗಂಡಸ್ತನ ಎಲ್ಲಿ ಹೋಗಿತ್ತು? ಈಗ ತಾಕತ್ತು, ಪೌರುಷ, ಗಂಡಸ್ತನ ಅದು ಇದು ಮಾತು ಯಾಕೆ? ಅಧಿಕಾರದಲ್ಲಿದ್ದಾಗ ಪೌರುಷ ಎಲ್ಲಿ ಹೋಗಿತ್ತು? ಗಂಡಸ್ತನ ಎಲ್ಲಿ ಹೋಗಿತ್ತು. ಈಗ ಗಂಡಸ್ತನದ ಬಗ್ಗೆ ಮಾತನಾಡುತ್ತಿದ್ದೀರಿ. ಅಭಿವೃದ್ಧಿ ವಿಚಾರದಲ್ಲಿ ಗಂಡಸ್ತನ ತೊರಿಸಲಿ.
ಗೃಹ ಸಚಿವರ ವಿರುದ್ಧ ಮಾತನಾಡುತ್ತಿದ್ದೀರಿ, ಮೊದಲು ದೊಂಬರಾಟದ ಮಾತುಗಳನ್ನ ಬಿಡಿ. ಪ್ರತಿಪಕ್ಷವಾಗಿ ಸರ್ಕಾರಕ್ಕೆ ಸಲಹೆ ಕೊಡಿ. ರಾಜಕೀಯ ದೊಂಬರಾಟ ನಿಲ್ಲಿಸಿ. ನಿಯಮಗಳನ್ನ ಪಾಲಿಸಲು ನಾವು ಕೂಡ ನಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನ ರದ್ದು ಮಾಡಿದ್ದೇವೆ ಎಂದರು.
ಮಾಜಿ ಶಾಸಕ ಶಾಂತನಗೌಡಗೆ ಟಾಂಗ್ ನೀಡಿದ ರೇಣುಕಾಚಾರ್ಯ : ಎಳೆಯುವ ಎತ್ತಿಗೆ ಮೇವು ಹಾಕಿ ಅಂತಾ ಕೇಳಿದ್ದೇನೆ, ಮಾಡುವ ಕೆಲಸಕ್ಕೆ ಕೂಲಿ ಕೇಳಿದ್ದೇನೆ, ಮಾಡುವ ಕೆಲಸಕ್ಕೆ ಆಶೀರ್ವಾದ ಕೇಳಿದ್ದೇನೆ ಇದು ತಪ್ಪಾ? ಮಾಜಿ ಶಾಸಕರಿಗೆ ಜನರೇ ಉತ್ತರ ಕೊಟ್ಟದ್ದಾರೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಶಾಂತನಗೌಡರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.
ಮೋದಿಯವರ ಸಾಧನೆಗಳನ್ನು ಜನರ ಮುಂದೆ ಇಟ್ಟಿದ್ದೇನೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನ್ ಮಾಡಿದ್ದರು ಎಂಬುದನ್ನೂ ಜನರ ಮುಂದೆ ಇಟ್ಟಿದ್ದೇನೆ. ನಾನು ನಮ್ಮ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ನೀಡಿದ್ದೇನೆ. ವೇದಿಕೆಯಲ್ಲಿ ಬಹಿರಂಗವಾಗಿ ನನಗೆ ಆಶೀರ್ವಾದ ಮಾಡಿ. ನಮಗೆ ಯಾರು ವೋಟ್ ಹಾಕುತ್ತೀರಾ ಎಂದು ಕೇಳಿದ್ದೇನೆ, ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಕೋವಿಡ್ ಬಂದಾಗ ಎಲ್ಲಿ ಮಾಯವಾಗಿದ್ರಿ?: ಕೋವಿಡ್‌ನಿಂದ ಮೃತಪಟ್ಟವರಿಗೆ ತಲಾ ₹10 ಸಾವಿರ ಕೊಡುತ್ತೇನೆ ಎಂದು ಹೇಳಿದ್ದೆ. ಬಿಎಸ್‌ವೈ ಸಿಎಂ ಆಗಿದ್ದಾಗ 1 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದರು. ಒಂದು ಲಕ್ಷ ಕೊಟ್ಟವರಿಗೆ ನಾನು ನನ್ನ ಕಡೆಯಿಂದ ₹10 ಸಾವಿರ ಕೊಟ್ಟಿದ್ದೇನೆ. ಮನೆ ಬಿದ್ದವರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದೇನೆ. ನಾನು ನನ್ನ ಕ್ಷೇತ್ರದ ಎಲ್ಲರಿಗೂ ಸಹಾಯ ಮಾಡಿದ್ದೇನೆ. ಕೋವಿಡ್ ಬಂದಾಗ ಎಲ್ಲಿ ಮಾಯವಾಗಿದ್ರಿ. ಜಾತಿ ರಾಜಕಾರಣ ಮಾಡಬೇಡಿ, ನನ್ನ ಕೈಲಾದ ಸಹಾಯ ಮಾಡಿದ್ದೇನೆ, ಇಂತಹ ಆರೋಪಕ್ಕೆ ಜಗ್ಗಲ್ಲ ಎಂದು ವಾಗ್ದಾಳಿ ನಡೆಸಿದರು.