ಬೆಂಗಳೂರು: ವಿಶ್ವದ ದೊಡ್ಡ ಅರ್ಥಿಕ ತಜ್ಞನೋ, ಗ್ರಾಮದ ಆರ್ಥಿಕ ತಜ್ಞನೋ ಅವರಿಗ್ಯಾಕೆ ಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೆಚ್ಡಿಕೆಗೆ ತಿರುಗೇಟು ನೀಡಿದ್ದಾರೆ.
ವಿಶ್ವದ ದೊಡ್ಡ ಆರ್ಥಿಕ ತಜ್ಞರಾ ಎಂದು ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಬೆಂಗಳೂರಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಅವರಿಗ್ಯಾಕೆ ಬೇಕು, ನನ್ನ ಜೊತೆ ಚರ್ಚೆಗೆ ಕುಳಿತುಕೊಳ್ಳಲಿ. ನನಗೆ ಏನು ಗೊತ್ತಿದ್ಯೋ ಮಾತಾಡ್ತೀನಿ, ಅವ್ರಿಗೇನು ಗೊತ್ತಿದ್ಯೋ ಮಾತಾಡಲಿ. ಹಾಗಾದ್ರೆ ಇವ್ರೇನು ದೊಡ್ಡ ಆರ್ಥಿಕ ತಜ್ಞರಾ? ಪ್ರತಿಯೊಬ್ಬರಿಗೂ ಅವರದೇ ಆದ ನೈಪುಣ್ಯತೆ ಇರುತ್ತೆ. ಹಾಗೆಲ್ಲಾ ಹಗುರವಾಗಿ ಮಾತಾಡಬಾರದು ಎಂದು ತಿರುಗೇಟು ನೀಡಿದರು.
ಸಿಎಂ ಆರ್ಥಿಕ ಸಲಹೆಗಾರ ಸ್ಥಾನ: ಅಸಮಾಧಾನದ ಪ್ರಶ್ನೆ ಇಲ್ಲ. ಮಂತ್ರಿ ಪೋಸ್ಟ್ ಕೊಡಿ ಅಂತಾ ನಾನು ಸಿಎಂಗೂ ಕೇಳಿಲ್ಲ. ಸಿಎಂ ಪಕ್ಷದ ವರಿಷ್ಠರಾಗಿ ತೀರ್ಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಆರ್ಥಿಕ ಸಲಹೆಗಾರ ಸ್ಥಾನ ಕೊಟ್ಟಿದ್ದಾರೆ. ಬಹಳ ದೊಡ್ಡ ಚಾಲೆಂಜಿಂಗ್ ಜಾಬ್ ಇದು. ಸುಮ್ಮನೆ ಕಾರು, ಬೇರೆ ಸೌಲಭ್ಯಕ್ಕಾಗಿ ತಗೊಂಡಿಲ್ಲ. ನಂದೇ ಆದ ಐಡಿಯಾಸ್ ಇದೆ. ಸಿಎಂ ಕೂಡ ಎಕ್ಸ್ ಪರ್ಟ್ ಇದ್ದಾರೆ, ಅವ್ರ ಜೊತೆ ಕೆಲಸ ಮಾಡ್ತೇನೆ ಎಂದು ತಿಳಿಸಿದರು.
ಪಾಲಿಟಿಕ್ಸ್ ನಲ್ಲಿ ಸೀನಿಯರ್, ಜೂನಿಯರ್ ಅಂತ ಇಲ್ಲ. ಇದು ಜಾಬ್ ಅಲ್ಲ, ಸಾಮಾಜಿಕ ಸೇವೆ. ಅಸಮಾಧಾನ ಆಗಿದ್ದೀನಿ ಅನ್ನೋದ್ರಲ್ಲಿ ಅರ್ಥ ಇಲ್ಲ. ಈಗ ರಾಜಕಾರಣ ಒತ್ತಡದ ಮೇಲೆ ನಡೀತಾ ಇದೆ. ಜಾತಿ ಎಲ್ಲಾ ನೋಡಿಕೊಂಡು ಮಂತ್ರಿಮಂಡಲ ಮಾಡ್ತಾರೆ. ನಾನು ಸ್ಯಾಲರಿ ತಗೊಳ್ಳಲ್ಲ, ಎಂಎಲ್ ಎ ಆಗಿದ್ದಾಗಲೂ ಸ್ಯಾಲರಿ ತಗೊಂಡಿಲ್ಲ. ಮೊದಲಿನಿಂದಲೂ ಈ ಪದ್ಧತಿಯಿಂದ ಬಂದಿದ್ದೀನಿ ಎಂದರು.
ರಾಹುಲ್ ಗಾಂಧಿ ಪಿಎಂ ವಿಚಾರ: ರಾಹುಲ್ ಗಾಂಧಿ ಪಿಎಂ ಆಗಬೇಕೆಂದು ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಯರೆಡ್ಡಿ, ಅವರವರ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದೆಯೂ ನಾನು ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಬೇಕು ಅಂತಾ ಹೇಳಿದ್ದೀನಿ. ನನ್ನ ಚಾಯ್ಸ್ ಖರ್ಗೆ ಅಂತಾ ಹೇಳಿದ್ದೀನಿ. 40 ವರ್ಷಗಳ ರಾಜಕೀಯ ಅನುಭವ ಖರ್ಗೆಯವರಿಗೆ ಇದೆ. ಪ್ರಧಾನಿ ಆದ್ರೆ ಒಳ್ಳೇದು ಅಂಥಾ ಹೇಳಿದ್ದೇವೆ. ಹೈಕಮಾಂಡ್ ಕೇಳಿದ್ರೂ ವೈಯಕ್ತಿಕವಾಗಿ ಖರ್ಗೆ ಹೆಸರು ಹೇಳ್ತೀನಿ. ರಾಹುಲ್ ಗಾಂಧಿ ಕೂಡ ನಮ್ಮ ಲೀಡರ್. ಅವರು ಅಭ್ಯರ್ಥಿಯಾದ್ರೂ ನನಗೆ ಸಂತೋಷ. ಅಂತಿಮವಾಗಿ ಪಕ್ಷ ತೀರ್ಮಾನ ಮಾಡುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂಓದಿ:'ಹಿಂದುಳಿದವರಿಗೆ ಸಮಾನತೆ ದೊರೆತಾಗ ಮಾತ್ರ ಸ್ವಾತಂತ್ರ್ಯ ಸಾರ್ಥಕ': ಸಿಎಂ ಸಿದ್ದರಾಮಯ್ಯ