ಬೆಂಗಳೂರು: ವಿಡಿಯೋಗೂ ನನಗೂ ಸಂಬಂಧ ಇಲ್ಲ. ಅವರ ಹಿತಾಸಕ್ತಿಗಾಗಿ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಬಸವರಾಜ್ ದಡೇಸಗೂರು ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಣ ಪಡೆದುಕೊಂಡಿರುವ ಆರೋಪವನ್ನು ಅವರ ಹಿತಾಸಕ್ತಿಗಾಗಿ ಮಾಡುತ್ತಿದ್ದಾರೆ. ಅದರ ಬಗ್ಗೆ ಏನಿದ್ದರೂ ಅಭ್ಯರ್ಥಿ ತಂದೆ ಪರ್ಸಪ್ಪ ಉತ್ತರ ನೀಡುತ್ತಾರೆ. ಈ ಬಗ್ಗೆ ಬಂದಾಗ ನಾನು ಉತ್ತರ ಕೊಡುತ್ತೇನೆ. ಅದು ಸುಳ್ಳು ಆರೋಪ ಎಂದಿದ್ದಾರೆ.
ಇದನ್ನೂ ಓದಿ: ಮಧ್ಯಾಹ್ನ ಕಾಂಗ್ರೆಸ್ ಮಹತ್ವದ ಸುದ್ದಿಗೋಷ್ಠಿ: ಬಿಜೆಪಿ ಶಾಸಕರ ವಿಡಿಯೋ ಬಿಡುಗಡೆ?
ರಾಜಕಾರಣಕ್ಕೆ ಶಿವರಾಜ್ ತಂಗಡಗಿ ಆರೋಪ ಮಾಡಿದ್ದಾರೆ. ಧೈರ್ಯ ಇದ್ದರೆ ಚುನಾವಣೆಗೆ ಬಾ, ಅಲ್ಲಿ ಎದುರಿಸೋಣ. ಸೋಲಿನ ಭಯದಲ್ಲಿ ಈ ರೀತಿ ಮಾಡಿದ್ದಾರೆ. ಧೈರ್ಯ ಇದ್ದರೆ ಇನ್ನು ವಿಡಿಯೋಗಳು ಇದ್ದರೆ ಅದನ್ನು ಬಿಡುಗಡೆ ಮಾಡು. ಸಭಾಧ್ಯಕ್ಷರ ಮುಂದೆ ವಿಡಿಯೋ ಮಂಡಿಸಲಿ. ಬೇರೆ ಸಂದರ್ಭದಲ್ಲಿ ಮಾತನಾಡಿದ್ದನು ಇಲ್ಲಿ ಬಳಸುತ್ತಿದ್ದಾರೆ. ಸೆ.23ರ ನಂತರ ನಾನು ಉತ್ತರ ಕೊಡುತ್ತೇನೆ. ಈ ಬಗ್ಗೆ 15 ಮಂದಿ ಹೇಳಿಕೆ ನೀಡಿರುವ ಬಗ್ಗೆ ವಿಡಿಯೋ ಇದೆ ಅಂತಾರೆ. ನಾನೇ ಕಾರು ಕಳಿಸುತ್ತೇನೆ ಅವರನ್ನು ಕಳಿಸಿ. ಆದಷ್ಟು ಬೇಗ ವಿಡಿಯೋ ಬಿಡುಗಡೆ ಮಾಡಿ. ತಡಮಾಡಬೇಡಿ ಎಂದು ಶಿವರಾಜ್ ತಂಗಡಗಿಗೆ ದಡೇಸಗೂರು ಸವಾಲು ಹಾಕಿದರು.
ಸಿಎಂ ವಿಡಿಯೋ ಬಗ್ಗೆ ಏನೂ ನನ್ನ ಬಳಿ ಮಾತನಾಡಿಲ್ಲ. ಅವರನ್ನು ಕ್ಷೇತ್ರದ ಬಗ್ಗೆ ಚರ್ಚೆ ನಡೆಸಲು ಭೇಟಿಯಾಗಿದ್ದೇನೆ. ನಿನ್ನೆ ಕಲಾಪದಿಂದ ಅರ್ಧಕ್ಕೆ ಹೊರ ಹೋಗುವಂತೆ ಬಿಜೆಪಿ ನಾಯಕರು ನನಗೆ ಹೇಳಿಲ್ಲ. ಅದು ಸುಳ್ಳು ಸುದ್ದಿ. ನಾನು ಊಟಕ್ಕಾಗಿ ಹೊರ ಹೋಗಿದ್ದೆ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ.. ಆಡಿಯೋ ಹಿಂದೆ ರಾಜಕೀಯ ಕುತಂತ್ರ: ಶಾಸಕ ದಡೇಸಗೂರು