ಬೆಂಗಳೂರು: ವಿಧಾನಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್ ಅವರು ಓದಿದ ಸಂವಿಧಾನದ ಪೀಠಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ಇಂದು ಸೋಮವಾರ ನಡೆಯಿತು.
ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿ ಸದನದಿಂದ ನಿರ್ಗಮಿಸಿದ ನಂತರ ಮತ್ತೆ ಸದನ ಸಮಾವೇಶಗೊಂಡಾಗ, ಸಭಾಧ್ಯಕ್ಷರು, ಸ್ವಯಂ ಪ್ರೇರಿತವಾಗಿ ಸಂವಿಧಾನದ ಪೀಠಿಕೆಯನ್ನು ಓದಲಾರಂಭಿಸಿ, ಸದಸ್ಯರು ಇದಕ್ಕೆ ಧ್ವನಿಗೂಢಿಸಬೇಕು ಎಂದು ಮನವಿ ಮಾಡಿಕೊಂಡರು. ಪೀಠಿಕೆಯನ್ನು ಸಭಾಧ್ಯಕ್ಷ ಯು. ಟಿ. ಖಾದರ್ ಓದಿ ಮುಗಿಸಿದ ನಂತರ, ಎದ್ದುನಿಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರವಾಗಿ ಆಕ್ಷೇಪಿಸಿದರು.
ನೀವು ಓದಿದ ಸಂವಿಧಾನ ಪೀಠಿಕೆಗೆ ವಿರೋಧ- ಯತ್ನಾಳ್: ''ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಮೂಲ ಪೀಠಿಕೆಗೂ, ತಾವು ಓದಿದ ಪೀಠಿಕೆಗೂ ವ್ಯತ್ಯಾಸವಿದೆ. ಮೂಲ ಪೀಠಿಕೆಯನ್ನು ತಮಗೆ ತೋಚಿದಂತೆ ಬದಲಾಯಿಸಲು ಸಾಧ್ಯವಿಲ್ಲ. ಈ ರೀತಿ ಮಾಡುವುದರಿಂದ ಸಂವಿಧಾನಕ್ಕೆ ಅಪಚಾರ ಎಸಗಿದಂತಾಗುತ್ತದೆ. ಆದ್ದರಿಂದ ನೀವು ಓದಿದ ಸಂವಿಧಾನ ಪೀಠಿಕೆಗೆ ತಮ್ಮ ತೀವ್ರ ವಿರೋಧವಿದೆ'' ಎಂದು ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರು, ''ನೀವು ಓದಿದ ಪೀಠಿಕೆಗೂ, ನಮಗೆ ನೀಡಿರುವ ಪೀಠಿಕೆಯ ಸಾರಾಂಶದಲ್ಲಿ ತಪ್ಪಾಗಿದೆ. ಇದನ್ನು ಸರಿಪಡಿಸಿಕೊಳ್ಳಬೇಕು'' ಎಂದು ಸಲಹೆ ನೀಡಿದರು. ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ''ಸಭಾಧ್ಯಕ್ಷರು ಓದಿದ ಪೀಠಿಕೆಗೂ, ನಮಗೆ ಕೊಟ್ಟಿರುವ ಪೀಠಿಕೆಯ ಪ್ರತಿಗಳಲ್ಲಿ ವ್ಯತ್ಯಾಸವಾಗಿದೆ. ಆದರೆ, ಎರಡರ ಅರ್ಥವೂ ಒಂದೇ ಆಗಿದೆ'' ಎಂದು ಸಮರ್ಥಿಸಿಕೊಂಡರು.
ಮತ್ತೆ ಎದ್ದು ನಿಂತ ಯತ್ನಾಳ್, ಸಂವಿಧಾನದ ಮೂಲ ಪೀಠಿಕೆಯನ್ನು ನಾಳೆಯೇ ಸದನದಲ್ಲಿ ಓದಬೇಕು ಎಂದು ಒತ್ತಾಯಿಸಿದರು.
ನಂತರ ಸಭಾಧ್ಯಕ್ಷ ಯು. ಟಿ. ಖಾದರ್ ಮಾತನಾಡಿ, ''ಆಗಿರುವ ಲೋಪವನ್ನು ಸರಿಪಡಿಸಿಕೊಳ್ಳಲು ತಾವು ನೀಡಿರುವ ಸಲಹೆಯನ್ನು ಪರಿಗಣಿಸುವುದಾಗಿ ತಿಳಿಸಿ, ಎಲ್ಲ ಸದಸ್ಯರು ಅವರವರ ಕ್ಷೇತ್ರಗಳಲ್ಲಿ ಸಂವಿಧಾನದ ಆಶಯಗಳ ಅನ್ವಯ ಸರ್ವರ ಏಳಿಗೆಗಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು. ನಂತರ ವಿಧಾನಸಭೆ ಕಾರ್ಯದರ್ಶಿ ಎಂ. ಕೆ. ವಿಶಾಲಾಕ್ಷಿ ಅವರು, ವರದಿ ಮಂಡಿಸಿ ರಾಜ್ಯಪಾಲರ ಭಾಷಣದ ಪ್ರತಿಯನ್ನು ಸದನದ ಮುಂದಿಡುವುದು ಎಂದು ಪ್ರಕಟಿಸಿದರು.
ನಂತರ ಸಭಾಧ್ಯಕ್ಷರು, ಸರ್ಕಾರಿ ಮುಖ್ಯಸಚೇತಕರಾಗಿ ಅಶೋಕ್ ಪಟ್ಟಣ್ ಅವರನ್ನು ನೇಮಕ ಮಾಡಿರುವುದನ್ನು ಪ್ರಕಟಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಅವರ ಪತ್ರದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ಉಪ ನಾಯಕಿಯಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯಕ್ ಅವರನ್ನು ನೇಮಕ ಮಾಡಿರುವುದಾಗಿ ತಿಳಿಸಿದರು. ಬಳಿಕ ಬಳಿಕ ಸಭಾಧ್ಯಕ್ಷರು ಸಂತಾಪ ಸೂಚನಾ ಕಲಾಪವನ್ನು ಕೈಗೆತ್ತಿಕೊಂಡರು.
ಇದನ್ನೂ ಓದಿ: Governor Speech: ಹಸಿದವರಿಗೆ ಅನ್ನ ನೀಡಿದ ಅತ್ಯಂತ ಜನಸ್ನೇಹಿ ಸರ್ಕಾರ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ