ಬೆಂಗಳೂರು : ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಬಹಿರಂಗವಾಗುತ್ತಿದೆ. ಜನ ಸಂಕಲ್ಪ ಯಾತ್ರೆಯಲ್ಲಿ ಒಟ್ಟಿಗೇ ಪ್ರವಾಸ ಮಾಡುತ್ತಿರುವ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡುವೆ ಅಸಮಾಧಾನ ಮೂಡಿದೆ ಎನ್ನುವ ಕುರಿತು ರಾಜ್ಯ ಬಿಜೆಪಿ ಪಾಳಯದಲ್ಲಿಯೇ ಗುಸು ಗುಸು ಶುರುವಾಗಿದೆ.
ಡ್ಯಾಮೇಜ್ ಕಂಟ್ರೋಲ್ ಗೆ ರಾಜ್ಯ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಈ ನಡುವೆ ಹೈಕಮಾಂಡ್ ಮಟ್ಟದಲ್ಲಿಯೂ ಈ ಕುರಿತ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇತ್ತೀಚಿನ ಕೆಲ ದಿನಗಳಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ನಡವಳಿಕೆ ಗಮನಿಸಿದರೆ ಉಭಯ ನಾಯಕರ ನಡುವಿನ ಬಾಂಧವ್ಯದಲ್ಲಿ ಬಿರುಕು ಬಿದ್ದಿರಬಹುದು ಎನ್ನುವ ಅನುಮಾನ ಮೂಡುತ್ತಿದೆ.
ಗುರು - ಶಿಷ್ಯರಂತಿರುವ ಬಿಎಸ್ವೈ ಮತ್ತು ಬೊಮ್ಮಾಯಿ ನಡುವೆ ಅಂತರ ಕಂಡು ಬರುತ್ತಿದೆ. ಆದರೆ, ಇದು ಸ್ಪಷ್ಟವಾಗಿ ಉಭಯ ನಾಯಕರ ನಡುವಿನ ಅಸಮಾಧಾನ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಸಾಧ್ಯತೆ ಇದೆ ಎನ್ನುವ ಸುದ್ದಿ ಮಾತ್ರ ಕೇಸರಿ ಪಕ್ಷದ ಪಡಸಾಲೆಯಲ್ಲಿಯೇ ಹರಿದಾಡುತ್ತಿದೆ.
ಯಡಿಯೂರಪ್ಪ ಮತ್ತು ಬೊಮ್ಮಾಯಿ ನಡುವೆ ಅಸಮಾಧಾನ : ತುಮಕೂರು ಮತ್ತು ಕುಣಿಗಲ್ ನಲ್ಲಿ ನಡೆದ ಜನಸಂಕಲ್ಪ ಯಾತ್ರೆಗೆ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ದಿಢೀರ್ ಗೈರಾಗಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸಿಎಂ ಮತ್ತು ಯಡಿಯೂರಪ್ಪ ನಡುವೆ ಅಸಮಾಧಾನ ಉಂಟಾಗಿದೆ ಎಂಬ ಅನುಮಾನವನ್ನೂ ಹುಟ್ಟುಹಾಕಿತ್ತು.
ಈ ವಿಷಯ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಖುದ್ದು ಯಡಿಯೂರಪ್ಪ ಅವರೇ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದರು. ತುಮಕೂರು ಜನ ಸಂಕಲ್ಪ ಯಾತ್ರೆಗೆ ಕಾರಣಾಂತರಗಳಿಂದ ಗೈರಾಗಬೇಕಾಯಿತು. ಆದರೆ, ಮುಂದಿನ ಜನ ಸಂಕಲ್ಪ ಯಾತ್ರೆಗೆ ಗೈರಾಗುವ ಪ್ರಶ್ನೆಯೇ ಇಲ್ಲ. ಅನಿವಾರ್ಯವಾಗಿ ಇವತ್ತು ಅಹಮದಾಬಾದ್ ಗೆ ಹೊರಟಿದ್ದೇನೆ. ಅಲ್ಲಿಂದ ವಾಪಸ್ ಬಂದ ಮೇಲೆ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದರು.
ಎಲ್ಲವೂ ಸರಿಯಿಲ್ಲ ಎಂಬ ಅನುಮಾನ: ಆದರೆ, ಗುಜರಾತ್ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಡೆದ ಸನ್ನಿವೇಶ ಮತ್ತೆ ಬಿಎಸ್ವೈ, ಬೊಮ್ಮಾಯಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನ ಹುಟ್ಟುವಂತೆ ಮಾಡಿದೆ. ಸಿಎಂ ಆಯ್ಕೆಯಾಗಿ ವೀಕ್ಷಕರಾಗಿ ತೆರಳಿದ್ದ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಹಾಜರಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ತೆರಳಿದ್ದರು.
ಆದರೆ, ಖಾಸಗಿ ವಿಮಾನದಲ್ಲಿ ತೆರಳಿದ್ದ ಬೊಮ್ಮಾಯಿ ವಾಪಸ್ ಬರುವಾಗ ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ತಮ್ಮೊಂದಿಗೆ ವಿಮಾನದಲ್ಲಿಯೇ ಕರೆದುಕೊಂಡು ಬರಬಹುದಿತ್ತು. ಆದರೆ, ಅಂದು ರಾತ್ರಿ ಸಿಎಂ ಒಬ್ಬರೇ ವಿಶೇಷ ವಿಮಾನದಲ್ಲಿ ವಾಪಸ್ ಆದರು. ಮರುದಿನ ಬೆಳಗ್ಗೆ ಯಡಿಯೂರಪ್ಪ ಪ್ರಯಾಣಿಕ ವಿಮಾನದಲ್ಲಿ ಆಗಮಿಸಿದರು. ಇಬ್ಬರೂ ಒಟ್ಟಿಗೇ ಬರಬಹುದಾಗಿತ್ತಾದರೂ ಪ್ರತ್ಯೇಕವಾಗಿ ವಾಪಸ್ ಆಗಿದ್ದು ಮತ್ತೆ ಬಿಜೆಪಿ ಪಾಳಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ನಾಯಕರು: ವಿಷಯದ ಗಂಭೀರತೆ ಅರಿತ ರಾಜ್ಯ ಬಿಜೆಪಿ ನಾಯಕರು ಇದೀಗ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಯಡಿಯೂರಪ್ಪ ಜೊತೆ ಖುದ್ದು ಮಾತುಕತೆ ನಡೆಸಿದ್ದಾರೆ. ಅಸಮಾಧಾನದಂತಹ ಕಾರಣಗಳ ಕುರಿತು ಚರ್ಚಿಸಿದ್ದಾರೆ. ಆದರೆ, ಯಾವ ಕಾರಣಕ್ಕೆ ಉಭಯ ನಾಯಕರ ನಡುವೆ ಅಸಮಾಧಾನ ಇದೆ. ಅಥವಾ ಅಸಮಾಧಾನ ಇರುವುದು ನಿಜವೋ ಕೇವಲ ವದಂತಿಯೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಸ್ಪಷ್ಟೀಕರಣ ನೀಡಿದ ನಾಯಕರು: ಯಡಿಯೂರಪ್ಪಗೆ ಮುನಿಸು ಮತ್ತು ಸಿಎಂ ಜತೆ ಭಿನ್ನಾಭಿಪ್ರಾಯ ವಿಚಾರ ಕುರಿತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸ್ಪಷ್ಟೀಕರಣ ನೀಡಿದ್ದಾರೆ. ಯಡಿಯೂರಪ್ಪ ನಮ್ಮ ಪಕ್ಷದ ಅಗ್ರ ನಾಯಕ. ಎಲ್ಲ ಜನಸಂಕಲ್ಪ ಸಭೆಗಳಿಗೂ ಯಡಿಯೂರಪ್ಪ ಸಿಎಂ ಜತೆಗೇ ಬಂದಿದ್ದಾರೆ. ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಮಟ್ಟದ ಜವಾಬ್ದಾರಿಯೂ ಇದೆ. ನಮ್ಮ ಪಕ್ಷದ ವರಿಷ್ಠ ನಾಯಕರಲ್ಲಿ ಯಡಿಯೂರಪ್ಪ ಸಹ ಒಬ್ಬರು. ಅವರು ಬೇಸರಗೊಂಡಿದ್ದಾರೆ ಅನ್ನೋದು ಸುಳ್ಳು ಎಂದರು.
ಅಹಮದಾಬಾದ್ ನಿಂದ ಒಟ್ಟಿಗೇ ಹೋಗೋಣ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಯಡಿಯೂರಪ್ಪ ಅವರನ್ನು ಕರೆದರು.
ಆದರೆ ಯಡಿಯೂರಪ್ಪ ಅವರು ಇನ್ನೂ ಇಬ್ಬರ ಭೇಟಿ ಮಾಡಿ ಮಾತನಾಡಿ ಬರುವುದಾಗಿ ಹೇಳಿದ್ದರು. ಹಾಗಾಗಿ ಸಿಎಂ ಒಬ್ಬರೇ ವಿಶೇಷ ವಿಮಾನದಲ್ಲಿ ವಾಪಸ್ ಬಂದರು.
ಇದರಲ್ಲಿ ಭಿನ್ನಾಭಿಪ್ರಾಯ, ಅಸಮಾಧಾನದಂತಹ ಯಾವುದೇ ವಿಷಯ ಇಲ್ಲ. ಅದೆಲ್ಲಾ ಕೇವಲ ಗಾಳಿ ಸುದ್ದಿ .ಯಡಿಯೂರಪ್ಪ ಮತ್ತು ಬೊಮ್ಮಾಯಿ ಈಗಲೂ ಜತೆಯಲ್ಲೇ ಇದ್ದಾರೆ, ಮುಂದೆಯೂ ಜತೆಗೇ ಇರುತ್ತಾರೆ ಎಂದರು.
ಯಾವುದೇ ಅಸಮಾಧಾನ ಇಲ್ಲ: ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಬಿಜೆಪಿ ನಾಯಕ ರವಿಕುಮಾರ್, ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡುವೆ ಯಾವುದೇ ಅಸಮಾಧಾನ ಇಲ್ಲ. ಜನ ಸಂಕಲ್ಪ ಯಾತ್ರೆಗಳಿಂದ ಯಡಿಯೂರಪ್ಪ ದೂರ ಉಳಿದಿಲ್ಲ. ಗುಜರಾತ್ ಪ್ರವಾಸದ ಕಾರಣಕ್ಕೆ ಎರಡು ಯಾತ್ರೆಗೆ ಗೈರಾಗಿದ್ದರು.
ಆದರೆ, ಡಿಸೆಂಬರ್16ರಂದು ಪಾಂಡವಪುರ ಹಾಗೂ ಮದ್ದೂರಿನಲ್ಲಿ ಜನಸಂಕಲ್ಪ ಸಮಾವೇಶ ಇದೆ. ಯಡಿಯೂರಪ್ಪ, ಗೋಪಾಲಯ್ಯ, ನಾರಾಯಣ ಗೌಡ ಎಲ್ಲರೂ ಆಗಮಿಸಲಿದ್ದಾರೆ. ನಮ್ಮ ಅಧ್ಯಕ್ಷರೇ ಹೋಗಿ ಯಡಿಯೂರಪ್ಪ ಜೊತೆ ಮಾತನಾಡಿ ಬಂದಿದ್ದಾರೆ. ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ ಎನ್ನುವ ವಿಷಯ ದೆಹಲಿಗೂ ತಲುಪಿದೆ. ಯಾವ ವಿಷಯದಲ್ಲಿ ಅಸಮಾಧಾನಗೊಂಡಿದ್ದಾರೆ ಎನ್ನುವುದು ಮಾತ್ರ ನಿಗೂಢವಾಗಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳುತ್ತಿದ್ದು, ಗಡಿ ವಿಷಯದ ಕುರಿತು ಅಮಿತ್ ಶಾ ಜೊತೆ ಸಭೆ ಇದೆ. ಸಭೆ ನಂತರ ಅನೌಪಚಾರಿಕವಾಗಿ ಯಡಿಯೂರಪ್ಪ ಅಸಮಾಧಾನದ ವಿವಾದದ ಕುರಿತು ಹರಿದಾಡುತ್ತಿರುವ ಸುದ್ದಿಯ ಕುರಿತು ವಿವರಣೆ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಮತ್ತೊಬ್ಬ ಸದಾನಂದಗೌಡರು ಆಗುತ್ತಾರಾ ಬೊಮ್ಮಾಯಿ: 2008ರಲ್ಲಿ ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪ 2011ರಲ್ಲಿ ರಾಜೀನಾಮೆ ಕೊಡುವ ಸಂದರ್ಭ ಬಂದಿತ್ತು. ಆಗ ತಮ್ಮ ನಂಬಿಕಸ್ತರಾಗಿದ್ದ ಡಿ.ವಿ ಸದಾನಂದಗೌಡರನ್ನು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಿಸಿದ್ದರು. ಆದರೆ ಸದಾನಂದಗೌಡರು ತಮ್ಮ ವಿರುದ್ಧ ತಿರುಗಿಬಿದ್ದರು ಎನ್ನುವ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿ ಸದಾನಂದಗೌಡರನ್ನು ಆಯ್ಕೆ ಮಾಡಲು ತಾವೇ ಸೋಲಿಸಿದ್ದ ಜಗದೀಶ್ ಶೆಟ್ಟರ್ಗೆ ಪಟ್ಟ ಕಟ್ಟಿದ್ದರು.
ಇದೀಗ ಅಂತಹ ಸನ್ನಿವೇಶ ಏನಾದರೂ ಸೃಷ್ಟಿಯಾಗುತ್ತಿದೆಯಾ? ಬಿಎಸ್ವೈ ವಿರೋಧ ಕಟ್ಟಿಕೊಳ್ಳಲಿದ್ದಾರಾ ಬೊಮ್ಮಾಯಿ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಬೊಮ್ಮಾಯಿ ಯಡಿಯೂರಪ್ಪ ಅವರನ್ನು ಸಾಕಷ್ಟು ಹತ್ತಿರದಿಂದ ನೋಡಿದ ವ್ಯಕ್ತಿ. ಹಾಗಾಗಿ ಅಂತಹ ತಪ್ಪು ಮಾಡುವ ಸಾಧ್ಯತೆ ಇಲ್ಲ ಎಂದು ಸಿಎಂ ಆಪ್ತ ಮೂಲಗಳು ಹೇಳಿವೆ.
ಒಟ್ಟಿನಲ್ಲಿ ಸಕಾರಣವಿಲ್ಲದೇ ಯಡಿಯೂರಪ್ಪ ಮತ್ತು ಬೊಮ್ಮಾಯಿ ನಡುವೆ ಅಸಮಾಧಾನ ಇದೆ ಎನ್ನುವ ಸುದ್ದಿ ಬಿಜೆಪಿಯಲ್ಲಿ ಹರಿದಾಡುತ್ತಿದೆ. ಈ ವಿಷಯದ ಬಗ್ಗೆ ಪಕ್ಷದ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದರೂ ಅಸಮಾಧಾನದ ಹೊಗೆಯಾಡುತ್ತಿರುವುದು ಮಾತ್ರ ನಿಂತಿಲ್ಲ. ಇದು ವದಂತಿಯೋ ಅಥವಾ ಅಸಮಾಧಾನ ಇರುವುದು ನಿಜವೋ ಎನ್ನುವುದು ಮಾತ್ರ ಸದ್ಯಕ್ಕೆ ನಿಗೂಢವಾಗಿದೆ.
ಇದನ್ನೂ ಓದಿ : ಸಚಿವ ಸಂಪುಟ ಮರು ಸೇರ್ಪಡೆಗೆ ಮಾಜಿ ಸಚಿವರ ಬಿಗಿಪಟ್ಟು.. ಇಕ್ಕಟ್ಟಿನಲ್ಲಿ ಸಿಎಂ?