ಬೆಂಗಳೂರು: ಚಾಕಲೇಟ್ ತಿಂದಿದ್ದನ್ನು ಪ್ರಶ್ನಿಸಿ ಬೈದಿದ್ದ ತಂದೆಯ ವಿರುದ್ಧ ಕೋಪಿಸಿಕೊಂಡು ಕಾಣೆಯಾಗಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕೊನೆಗೂ ಧರ್ಮಸ್ಥಳದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದು ಪೋಷಕರಿಗೆ ಒಪ್ಪಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ 9 ಹಾಗೂ 11 ವರ್ಷದ ಸಹೋದರಿಯರನ್ನು ಧರ್ಮಸ್ಥಳದಲ್ಲಿ ಕಂಡು ಹಿಡಿದು ಪೊಲೀಸರು ಪೋಷಕರ ಮಡಿಲಿಗೆ ಹಾಕಿದ್ದಾರೆ.
ಚಾಕಲೇಟ್ ತಿನ್ನಲು ಅಪ್ಪನ ಬಳಿ ಹಣ ಕೊಡುವಂತೆ ಹೆಣ್ಣು ಮಕ್ಕಳು ಕೇಳಿದ್ದಾರೆ. ಹಣ ಕೊಡಲು ತಂದೆ ನಿರಾಕರಿಸಿದ್ದಾರೆ. ಬಳಿಕ ಹೇಗೋ ಹಣ ಹೊಂದಿಸಿಕೊಂಡು ಅಂಗಡಿಯೊಂದರಲ್ಲಿ ಚಾಕಲೇಟ್ ಖರೀದಿಸಿ ತಿಂದಿದ್ದಾರೆ. ನಂತರ ತಂದೆಗೂ ಕರೆ ಮಾಡಿ ಚಾಕಲೇಟ್ ತಿಂದಿರುವ ಬಗ್ಗೆ ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ತಂದೆ ಚಾಕಲೇಟ್ ಯಾಕೆ ತಿಂದಿದ್ದೀರಿ ಎಂದು ಬೈದು ಮನೆಗೆ ಹೋಗುವಂತೆ ಬುದ್ಧಿವಾದ ಹೇಳಿದ್ದರು.
ಇದರಿಂದ ಕೋಪಿಸಿಕೊಂಡ ಮಕ್ಕಳು ಮನೆಗೆ ತೆರಳಿದ್ದಾರೆ. ಟಿವಿಯಲ್ಲಿ ಬರುತ್ತಿದ್ದ ಶಕ್ತಿ ಯೋಜನೆಯ ಫ್ರೀ ಬಸ್ ಬಗ್ಗೆ ಸುದ್ದಿ ನೋಡಿದ್ದಾರೆ. ಅಪ್ಪನಿಗೆ ಬುದ್ಧಿ ಕಲಿಸಲು ನಿರ್ಧರಿಸಿದ ಮಕ್ಕಳು ಮನೆಯಲ್ಲಿ ಎರಡು ಜೊತೆ ಬಟ್ಟೆ ತೆಗೆದುಕೊಂಡು ಬಸ್ ಮೂಲಕ ಶುಕ್ರವಾರ ರಾತ್ರಿ ಧರ್ಮಸ್ಥಳದ ಬಸ್ ಹತ್ತಿದ್ದಾರೆ. ಕೆಲಸ ಮುಗಿಸಿ ಮನೆಗೆ ಬಂದ ತಂದೆ ಮಕ್ಕಳು ಕಾಣದಿರುವ ಬಗ್ಗೆ ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. ಗಾಬರಿಗೊಂಡು ಕೊನೆಗೆ ಕೋಣನಕುಂಟೆ ಪೊಲೀಸರಿಗೆ ನಡೆದ ವಿಷಯದ ಬಗ್ಗೆ ಹೇಳಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಬಾಲಕಿಯರು ತೆಗೆದುಕೊಂಡು ಹೋಗಿದ್ದ ಮೊಬೈಲ್ ಟ್ರ್ಯಾಕ್ ಮಾಡಿದಾಗ ಧರ್ಮಸ್ಥಳದಲ್ಲಿ ಇರುವುದು ಗೊತ್ತಾಗಿದೆ. ನಂತರ ಅವರನ್ನು ಪತ್ತೆ ಹಚ್ಚಿ ಪೊಲೀಸರು ಧರ್ಮಸ್ಥಳದಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಬಾಲಕಿಯರಿಗೆ ಬುದ್ಧಿ ಹೇಳಿ ಪೋಷಕರಿಗೆ ಒಪ್ಪಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪೋಷಕರಿಗೆ ಹೆದರಿ, ಡೆಲಿವರಿ ಬಾಯ್ ಮೇಲೆ ಆರೋಪ ಹೊರಿಸಿದ ಬಾಲಕಿ: ಪೋಷಕರು ಮನೆಗೆ ಬರೋ ಹೊತ್ತಿಗೆ ಬಾಲಕಿ ಮನೆಯೊಳಗಿಲ್ಲದೆ ಟೆರೇಸ್ಗೆ ಆಡಲು ಹೋಗಿದ್ದು, ಬಾಲಕಿ ಮನೆಯೊಳಗೆ ಇಲ್ಲದ್ದನ್ನು ಕಂಡು ಎಲ್ಲೆಡೆ ಹುಡುಕಾಡಿದ ಪೋಷಕರಿಗೆ ಬಾಲಕಿ ಟೆರೇಸ್ ಮೇಲೆ ಸಿಕ್ಕಿದ್ದಳು. ತಾನು ಟೆರೇಸ್ ಮೇಲೆ ಬಂದಿರುವುದಕ್ಕೆ ಪೋಷಕರು ಬೈಯ್ಯುತ್ತಾರೆ ಎಂದು ಆಗಷ್ಟೇ ಬಂದಿದ್ದ ಫುಡ್ ಡೆಲಿವರಿ ಬಾಯ್ ತನ್ನನ್ನು ಬಲವಂತವಾಗಿ ಟೆರೇಸ್ಗೆ ಕದ್ದೊಯ್ದ ಎಂದು ಸುಳ್ಳು ಆರೋಪ ಮಾಡಿದ್ದಳು.
ಮಗಳ ಮಾತು ನಂಬಿ ಅಲ್ಲಿದ್ದ ಫುಡ್ ಡೆಲಿವರಿ ಬಾಯ್ಗೆ ಪೋಷಕರು ಮಾತ್ರವಲ್ಲದೆ ಅಪಾರ್ಟ್ಮೆಂಟ್ನ ನರೆಹೊರೆಯವರೆಲ್ಲರೂ ಹೊಡೆದಿದ್ದರು. ನಂತರ ಈ ಕುರಿತು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಬಂದು, ತನಿಖೆ ನಡೆಸಿದಾಗ ವಿಷಯ ಬಯಲಾಗಿತ್ತು. ಅಲ್ಲೇ ಇದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದಾಗ ಬಾಲಕಿ ತಾನಾಗಿಯೇ ಟೆರೇಸ್ಗೆ ಹೋಗಿರುವುದು ಗೊತ್ತಾಗಿತ್ತು. ಬಾಲಕಿಯನ್ನು ಪೊಲೀಸರು ವಿಚಾರಿಸಿದಾಗ, ಪೋಷಕರು ಆಡಲು ಹೋಗಿದ್ದಕ್ಕೆ ಬೈಯ್ಯುತ್ತಾರೆ ಎನ್ನುವ ಭಯದಲ್ಲಿ ಬಾಲಕಿ ಫುಡ್ ಡೆಲಿವರಿ ಬಾಯ್ ಮೇಲೆ ಆರೋಪ ಹೊರಿಸಿರುವುದು ಗೊತ್ತಾಗಿತ್ತು.
ಇದನ್ನೂ ಓದಿ: ಅವಳಿ ಸಹೋದರಿಯರು ನಾಪತ್ತೆ: ಮಕ್ಕಳನ್ನು ಪತ್ತೆ ಮಾಡುವಂತೆ ಸಿಎಂಗೆ ಪತ್ರ ಬರೆದ ತಂದೆ