ಬೆಂಗಳೂರು: ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಬಾಲಕನ ಮೃತದೇಹವನ್ನು ಪತ್ತೆ ಮಾಡುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಮೂರು ದಿನದಿಂದ ನಾಪತ್ತೆಯಾಗಿದ್ದ ಮಗುವಿಗಾಗಿ ಅಗ್ನಿಶಾಮಕ ದಳ, ಎನ್ಡಿಆರ್ಎಫ್, ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರು. ಕೊನೆಯದಾಗಿ ಇಂದು ಮೊಹಮ್ಮದ್ ಝೈನ್ ಎಂಬ ಬಾಲಕ ಆರ್.ಆರ್. ನಗರದ ಗ್ಲೋಬಲ್ ವಿಲೇಜ್ ಬಳಿ ಶವವಾಗಿ ಪತ್ತೆಯಾಗಿದ್ದಾನೆ.
ಕಳೆದ ಶುಕ್ರವಾರ ರಾತ್ರಿ ಪಕ್ಕದ ಮನೆಯ ಹುಡುಗಿಯ ಜೊತೆ ಮೊಹಮ್ಮದ್ ಝೈನ್ ಕಸ ಎಸೆಯಲು ಹೋಗಿದ್ದ. ಈ ವೇಳೆ ರಾಜಕಾಲುವೆಗೆ ಆಯಾ ತಪ್ಪಿ ಬಾಲಕ ಬಿದ್ದಿದ್ದ. ಹೀಗಾಗಿ
ಕಳೆದ ಮೂರು ದಿನಗಳಿಂದ ಬಿಬಿಎಂಪಿ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಹುಡುಕಾಡಿ ಕೊನೆಗೂ ಪತ್ತೆ ಮಾಡಿದ್ದಾರೆ.
ಮೃತಪಟ್ಟ ಬಾಲಕನ ಕುಟುಂಬಕ್ಕೆ ಮಾನವೀಯ ನೆಲೆಯಿಂದ ಬಿಬಿಎಂಪಿ ಪರಿಹಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಆಯುಕ್ತರೊಂದಿಗೆ ಚರ್ಚಿಸಿ ಪರಿಹಾರ ನೀಡುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ. ಈ ಹಿಂದೆ ಕೊಡುತ್ತಿದ್ದಂತೆಯೇ ಮಾನವೀಯ ನೆಲೆಯಲ್ಲಿ ಬಾಲಕನ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರಧನ ಕೊಡುವುದಾಗಿ ತಿಳಿಸಿದ್ದಾರೆ.