ಬೆಂಗಳೂರು: ಸಚಿವಾಲಯದಿಂದ ಬೇರೆ ಇಲಾಖೆಗಳಿಗೆ ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಅವಕಾಶ ರದ್ದು ಪಡಿಸುವ ತೀರ್ಮಾನದ ವಿರುದ್ಧ ಸಚಿವಾಲಯ ಸಿಬ್ಬಂದಿ, ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಸಚಿವಾಲಯದ ಶಾಖಾಧಿಕಾರಿಗಳಿಗೆ ತಹಶೀಲ್ದಾರರ ಹುದ್ದೆಗೆ ನಿಯೋಜಿಸುವ ಅವಕಾಶ ರದ್ದು ಪಡಿಸಿದ್ದನ್ನು ಹಿಂಪಡೆಯಬೇಕು ಎಂದು ಸಿಬ್ಬಂದಿ ಆಗ್ರಹಿಸಿದರು.
ಕರ್ನಾಟಕ ನಾಗರೀಕ ಸೇವಾ(ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮ 1977ರಂತೆ ಸಚಿವಾಲಯ ಅಧಿಕಾರಿಗಳು ಇಚ್ಚಿಸಿದಲ್ಲಿ ಅವರನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಗೆ, ಸಮಾಜ ಕಲ್ಯಾಣ ಇಲಾಖೆ ಸೇರಿ ಇತರ ಇಲಾಖೆಯ ವಿವಿಧ ಹುದ್ದೆಗಳಿಗೆ 2-3 ವರ್ಷ ಅವಧಿಗೆ ನಿಯೋಜನೆ ಮೇಲೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿತ್ತು.
ಇದಕ್ಕೆ ತಡೆಯೊಡ್ಡುವ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮ 2021 ಕರಡು ನಿಯಮಕ್ಕೆ ಆಕ್ಷೇಪಣೆ ಸಲ್ಲಿಸಲು ಅಧಿಸೂಚನೆ ಹೊರಡಿಸಿರುವುದು ದುರದೃಷ್ಟಕರವಾಗಿದೆ. ಸಚಿವಾಲಯದ ಸೇವೆಯು ಒಂದು ಇಲಾಖೆಗೆ ಸೀಮಿತವಾಗಿರುವುದಿಲ್ಲ.
ಸಚಿವಾಲಯ ಅಧಿಕಾರಿ/ನೌಕರರು ರಾಜ್ಯದ ಎಲ್ಲಾ ಇಲಾಖೆಗಳ ಸೇವೆಯ ಅರಿವನ್ನು ಹಾಗೂ ನಿಯಮಗಳನ್ನು ರೂಪಿಸುವಲ್ಲಿ ಪರಿಣಿತಿಯನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅವರ ಅನುಭವವನ್ನು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.