ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ಉಪಚನಾವಣೆಯ ಮತದಾನದ ಹೊಸ್ತಿಲಲ್ಲಿದ್ದು, ಬಹುತೇಕ ಸಚಿವರು ಉಭಯ ಕ್ಷೇತ್ರಗಳಲ್ಲಿ ಮತಯಾಚನೆ ಮಾಡುವ ಮೂಲಕ ಆಡಳಿತದ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಈಗಾಗಲೇ ಆಕ್ರೋಶ ವ್ಯಕ್ತವಾಗುತ್ತಿದೆ.
ಅ.30ರಂದು ನಡೆಯುವ ಉಪಸಮರಕ್ಕೆ ಬಹುತೇಕ ಸಚಿವರು ಮತಯಾಚನೆಯಲ್ಲಿರುವುದನ್ನು ಕಾಂಗ್ರೆಸ್ ಖಂಡಿಸಿದೆ. ಇಂದು ಕೂಡ ವಿಧಾನಸೌಧಕ್ಕೆ ಕೆಲವೇ ಮಂದಿ ಸಚಿವರು ಹಾಜರಾಗಿದ್ದು ಕಂಡು ಬಂದಿದೆ. ಉಪಚುನಾವಣೆ ಪ್ರಚಾರಕ್ಕೆ ಬೆಂಗಳೂರು ಮೂಲದ ಸಚಿವರು ಹೊರತು ಪಡಿಸಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಹುತೇಕ ಸಚಿವರು ಹಾನಗಲ್ ಅಥವಾ ಸಿಂದಗಿ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ.
ಸಾರ್ವಜನಿಕರ ಪರದಾಟ
ಕಳೆದೊಂದು ವಾರದಿಂದ ಅರ್ಜಿ ಸಲ್ಲಿಕೆಗಾಗಿ ಹಾಗೂ ಕಡತ ವಿಲೇವಾರಿಗಾಗಿ ವಿಧಾನಸೌಧಕ್ಕೆ ಆಗಮಿಸುತ್ತಿರುವ ಸಾರ್ವಜನಿಕರು , ಸಚಿವರ ಅನುಪಸ್ಥಿತಿಯಲ್ಲಿ ಪರದಾಡುವಂತಾಗಿದೆ. ಸಾರ್ವಜನಿಕರ ಕೆಲಸಗಳು ಬಾಕಿ ಉಳಿದಿದ್ದು, ಕಚೇರಿಯಲ್ಲಿ ಕಡತಗಳು ಹೆಚ್ಚುತ್ತಲೇ ಇದೆ.
ಆದರೆ,ನಮ್ಮ ಕೆಲಸ ಇಂದಾಗಬಹುದು ನಾಳೆಯಾಗಬಹುದು ಎಂದು ಇಲ್ಲಿಗೆ ಬರುತ್ತಲೇ ಇದ್ದೇವೆ. ಕಳೆದ ವಾರದಿಂದ ಅರ್ಜಿ ನೀಡಲು ವಿಧಾನಸೌಧಕ್ಕೆ ಬರುತ್ತಿದ್ದೇನೆ. ಈವರೆಗೂ ಸಚಿವರು ಅವರ ಕಚೇರಿಗೆ ಬಂದಿಲ್ಲ ಎಂದು ವಿಧಾನಸೌಧದ ಬಳಿ ಸಚಿವರಿಗಾಗಿ ಕಾದು ಕುಳಿತಿದ್ದ ವ್ಯಕ್ತಿಯೊಬ್ಬರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ವಸತಿ ಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಕೆ.. ಸಮಾಜ ಕಲ್ಯಾಣ ಇಲಾಖೆ ಹೊಸ ಯೋಜನೆ