ಬೆಂಗಳೂರು: ನನಗೆ ತಿಳಿದ ಮಟ್ಟಿಗೆ ನಾಯಕತ್ವ ಬದಲಾವಣೆ ಇಲ್ಲ, ಅದು ಗಾಳಿ ಸುದ್ದಿಯಷ್ಟೇ. ಊಹಾಪೋಹಾಗಳನ್ನು ನಂಬಬಾರದು. ಕಟೀಲ್ ಅವರು ಆಡಿಯೋ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾಯಕತ್ವ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದರು. ನಾಯಕತ್ವ ಬದಲಾಗುತ್ತೆ ಅಂತ ಯಾರು ಹೇಳಿದ್ದಾರೆ? ಊಹಾಪೋಹಾಗಳನ್ನು ಕೇಳಬಾರದು. ಕಟೀಲ್ ಅವರು ಆಡಿಯೋ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಿಎಂಗೂ ದೂರು ಕೊಟ್ಟಿದ್ದಾರೆ. ಇದು ಅಪಪ್ರಚಾರಕ್ಕೆ ಮಾಡಿರುವ ಗಿಮಿಕ್ ಆಡಿಯೋ ಎಂದರು.
ಎಲ್ಲಾ ಶಾಸಕರ ಜತೆ ಮಾತಾಡಲು ಸಿಎಂ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸಭೆ ಕರೆಯೋದು ಅವರ ಕರ್ತವ್ಯ. ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಭೆ ಕರೆದಿದ್ದಾರೆ. ಸಿಎಂ ಆಗಿ ಯಡಿಯೂರಪ್ಪ ತಮ್ಮ ಕೆಲಸ ಮಾಡ್ತಿದ್ದಾರೆ. ನಾಯಕತ್ವ ಬಗ್ಗೆ ದೆಹಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ನಾನೇನು ದೆಹಲಿಗೆ ಹೋಗಿರಲಿಲ್ಲ. ಹೋಗಿ ಬಂದವರೇ ಬದಲಾವಣೆ ಇಲ್ಲ ಅಂದಮೇಲೆ ನನ್ನದೇನು ಎಂದು ಪ್ರಶ್ನಿಸಿದರು.