ಬೆಂಗಳೂರು: ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಕೆ.ಆರ್.ಪುರ ಕ್ಷೇತ್ರದ ಮುಖಂಡರ ಸಹಯೋಗದೊಂದಿಗೆ ಒಂದೇ ದಿನ ಹತ್ತು ಸಾವಿರ ಜನಕ್ಕೆ ದಿನಸಿ ಹಾಗೂ ಊಟ ವಿತರಣೆ ಮಾಡಿಸಿದರು.
ವಿಜ್ಞಾನ ನಗರ ವಾರ್ಡ್ನ ಕಗ್ಗದಾಸಪುರದಲ್ಲಿ ಸಮಾಜ ಸೇವಕ ಲೋಕೇಶ್ ಗೌಡ ದಂಪತಿ ಸಿದ್ದಪಡಿಸಿದ್ದ ದಿನಸಿ ಕಿಟ್ಗಳನ್ನ ಸಚಿವ ಭೈರತಿ ಬಸವರಾಜ್ ವಿತರಿಸಿದರು. ನಂತರ ಪ್ರತಿ ದಿನ ಸಾವಿರದ ಇನ್ನೂರು ಜನರಿಗೆ ಅಡುಗೆ ಮಾಡಿ, ವಿತರಣೆ ಮಾಡುತ್ತಿರುವ ಮಾಜಿ ಮಹಾನಗರ ಪಾಲಿಕೆ ಸದಸ್ಯ ಸಿದ್ದಲಿಂಗಯ್ಯ ಅವರು ಸಿದ್ದಪಡಿಸಿದ ಆಹಾರದ ಪ್ಯಾಕೆಟ್ಅನ್ನು ಸಾವಿರಾರು ಜನರಿಗೆ ವಿತರಣೆ ಮಾಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸಿವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಲಾಗಿದ್ದು,ಒಂದೇ ದಿನ ನಮ್ಮ ಪಕ್ಷದ ಮುಖಂಡರ ಸಹಯೋಗದೊಂದಿಗೆ 10 ಸಾವಿರ ದಿನಸಿ ಕಿಟ್, ತರಕಾರಿ ಸೇರಿದಂತೆ ಆಹಾರ ಸಾಮಾಗ್ರಿಗಳನ್ನ ವಿತರಿಸಿದ್ದೇನೆ. ಕೆ.ಆರ್.ಪುರ ಕ್ಷೇತ್ರದ ವಿಜ್ಞಾನ ನಗರ, ದೇವಸಂದ್ರ, ಹೆಚ್.ಎ.ಎಲ್, ಬಸವನಪುರ, ವಿಜಿನಾಪುರ ವಾರ್ಡ್ಗಳ ವ್ಯಾಪಿಯ ವಿವಿಧೆಡೆ ಬಡ ಕುಟುಂಬಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಸಾಮಗ್ರಿಗಳನ್ನು ವಿತರಿಸಲಾಗಿದ್ದು,ಕ್ಷೇತ್ರದ ವ್ಯಾಪ್ತಿಯಲ್ಲಿ ಆಹಾರ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಂಡಿದ್ದೇನೆ.
ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೂಲಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಲಾಕ್ಡೌನ್ ಪ್ರಾರಂಭದಿಂದಲೂ ದಿನಸಿ, ತರಕಾರಿ, ಆಹಾರ ಪ್ಯಾಕೆಟ್ಗಳ ಜೊತೆಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡುತ್ತಿದ್ದೇವೆ. ಎಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಡವರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದಾರೆ ಎಂದು ತಿಳಿಸಿದರು.