ಬೆಂಗಳೂರು: ರಾಜ್ಯದಲ್ಲಿ 6-9 ನೇ ತರಗತಿವರೆಗೆ ಪರೀಕ್ಷೆ ನಡೆಯಬೇಕೋ ಬೇಡವೋ ಎಂಬುದರ ಬಗ್ಗೆ ಇಂದಿನ ಸಭೆಯಲ್ಲಿ ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಎರಡು ದಿನಗಳಲ್ಲಿ ಇಲಾಖೆಯಿಂದ ಮತ್ತೊಂದು ಸಭೆ ನಡೆಸಿ, ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವರು, 6-9 ನೇ ತರಗತಿವರೆಗೆ ತರಗತಿಗಳು ಆರಂಭವಾಗಿತ್ತು. ಆದರೆ, ಕೋವಿಡ್ ಸೋಂಕು ಹೆಚ್ಚಳವಾದ ಕಾರಣ ಸ್ಥಗಿತ ಮಾಡಿ ಆದೇಶಿಸಲಾಗಿದೆ. ಇದರ ಜೊತೆಗೆ ಪರೀಕ್ಷೆ ನಡೆಯಬೇಕೋ ಬೇಡ್ವೋ ಎಂಬ ಚರ್ಚೆ ನಡೀತಿದೆ. ಈ ಕುರಿತು ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಶಿಕ್ಷಣ ಇಲಾಖೆಯಿಂದ ಸಭೆ ನಡೆಸಲಾಗಿದ್ದು, ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರು ಭಾಗಿಯಾಗಿದ್ದರು. ಸಭೆಯಲ್ಲಿ ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ, ಪೋಷಕರ ಪ್ರತಿನಿಧಿ, ಕ್ಯಾಮ್ಸ್, ರೂಪ್ಸಾ, ಮಾಧ್ಯಮಿಕ ಶಾಲೆಗಳ ಸಂಘ ಭಾಗಿಯಾಗಿದ್ದವು. 44 ಜನರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಎಲ್ಲರೂ ಕೂಡ ತಮ್ಮ ಅಭಿಪ್ರಾಯ ತಿಳಿಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು ಎಂದರು.
ಖಾಸಗಿ ಶಾಲಾ ಸಂಘಟನೆಗಳು ಯಾವುದಾದರೂ ಒಂದು ಮಾದರಿಯಲ್ಲಿ ಕಲಿಕಾ ಮೌಲ್ಯಾಂಕನ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಣ ತಜ್ಞರು- ಕಡ್ಡಾಯ ಶಿಕ್ಷಣ ಕಾಯಿದೆ ಅಡಿ ಮುಂದಿರುವ ದಾರಿಯನ್ನು ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರ ಅಭಿಪ್ರಾಯ ಪಡೆಯಲಾಗಿದೆ. ಸಭೆಯಲ್ಲಿ ನಾನು ಎಲ್ಲರ ಅನಿಸಿಕೆ, ಅಭಿಪ್ರಾಯ ಮುಕ್ತವಾಗಿ ಸ್ವೀಕರಿಸಿದ್ದೇನೆ. ಇನ್ನು ಎರಡು ದಿನಗಳಲ್ಲಿ ಇಲಾಖೆಯಿಂದ ಮತ್ತೊಂದು ಸಭೆ ನಡೆಸಿ, ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.