ಬೆಂಗಳೂರು: ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಲು ಇನ್ಮುಂದೆ ಎಲ್ಲ ಜಿಲ್ಲೆಗಳಲ್ಲಿ ಸಕಾಲ ಸಪ್ತಾಹ ಕಡ್ಡಾಯಗೊಳಿಸಬೇಕು. ಜೊತೆಗೆ ಎರಡು ಸಮಿತಿಗಳನ್ನು ರಚಿಸಬೇಕು ಎಂದು ಸಕಾಲ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ಎಲ್ಲಾ ಜಿಲ್ಲಾಧಿಕಾರಿ, ಜಿಪಂ ಸಿಇಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಕಾಲ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಎಲ್ಲ ಅಪರ ಜಿಲ್ಲಾಧಿಕಾರಿಗಳು ಪ್ರತಿ ಸೋಮವಾರ ಸಕಾಲ ವಿವರ ಪ್ರಗತಿ ಪರಿಶೀಲಿಸಬೇಕು. ಎಲ್ಲ ಕಚೇರಿಗಳ ಮುಂದೆ ಸಕಾಲದ ಮಾಹಿತಿ ಫಲಕ ಕಡ್ಡಾಯಗೊಳಿಸಬೇಕು. ಸಕಾಲ ಒಂದೇ ನಾಗರಿಕರಿಗೆ ಸರ್ಕಾರದ ಸೇವೆಯ ತೃಪ್ತಿ ಪಡಿಸುವ ಪ್ರಮುಖ ಯೋಜನೆ. ಈ ಬಗ್ಗೆ ಹೆಚ್ಚು ಆದ್ಯತೆ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಆದೇಶಿಸಿದರು.
ಉತ್ತಮ ಕಾರ್ಯನಿರ್ವಹಿಸಿದ ಜಿಲ್ಲೆಗಳಿಗೆ ಪುರಸ್ಕಾರ : ಜನವರಿ ತಿಂಗಳಿನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಸ್ಥಾನ, ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗ ಕ್ರಮವಾಗಿ 2 ಮತ್ತು 3 ನೇ ಸ್ಥಾನಗಳಿಸಿವೆ. ಬೆಂಗಳೂರು ನಗರ ಜಿಲ್ಲೆಗೆ ಕೊನೆಯ ಸ್ಥಾನ ದಕ್ಕಿದೆ. ತಾಲೂಕುವಾರು ತೆಗೆದುಕೊಳ್ಳುವುದಾದರೆ ಬೆಂಗಳೂರು ದಕ್ಷಿಣ ತಾಲೂಕು ಮೊದಲ ಸ್ಥಾನ ಪಡೆದಿದೆ ಎಂದು ಹೇಳಿದರು.
ಜನವರಿಯಲ್ಲಿ ಸಕಾಲ ಮೂಲಕ ಅರ್ಜಿ ವಿಲೇವಾರಿ ಪ್ರಮಾಣ ಶೇ 93.25 ಆಗಿದ್ದು, 2021, ಜನವರಿಯಲ್ಲಿ 26,45,996 ಅರ್ಜಿ ಸ್ವೀಕರಿಸಿದ್ದು, 22, 88,794 ಅರ್ಜಿಗಳು ವಿಲೇವಾರಿಯಾಗಿವೆ ಎಂದು ವಿವರಿಸಿದರು.
ಓದಿ:ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಪ್ರಸ್ತಾಪ: ಸಿಎಂ ನಿರ್ಧಾರವೇ ಅಂತಿಮ ಎಂದ ಸವದಿ
ಇದುವರೆಗೂ ಸಕಾಲ ಯೋಜನೆಯಡಿ 23,66,07,036 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 23,55,71,404 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. (ಫೆ. 22 ರಂತೆ ಅಂಕಿಅಂಶಗಳು). ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ನಡೆಯುವ ಸಕಾಲ ಮತ್ತು ಸೇವಾ ಸಿಂಧು ಪರಿಶೀಲನಾ ಸಭೆಯಲ್ಲಿ ಎಲ್ಲಾ ಇಲಾಖೆಗಳ ಸಕಾಲ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನವೆಂಬರ್ನಲ್ಲಿ ಮೊದಲ ಸ್ಥಾನಗಳಿಸಿದ ಮಂಡ್ಯ ಜಿಲ್ಲಾಧಿಕಾರಿ ಅವರಿಗೆ ಪ್ರಶಸ್ತಿ ಪತ್ರ, ಬೃಹತ್ ಗಡಿಯಾರ ನೀಡಿ ಗೌರವಿಸಲಾಯಿತು. ಅದೇ ರೀತಿ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಸಹ ಅಭಿನಂದಿಸಲಾಯಿತು.