ಬೆಂಗಳೂರು:'ಪರ್ವ' ನಾಟಕದ ಪ್ರದರ್ಶನವನ್ನ ರಂಗಾಯಣ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಪರ್ವ ನಾಟಕದ ಮೂಲಕ ನಾವು ಹಿರಿಯ ಸಾಹಿತಿಗೂ ಗೌರವ ನೀಡಿದಂತಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಮೈಸೂರಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಖ್ಯಾತ ಕಾದಂಬರಿಕಾರ ಡಾ. ಎಸ್‌ಎಲ್ ಭೈರಪ್ಪರ ‘ಪರ್ವ’ ಕಾದಂಬರಿ ಆಧಾರಿತ ನಾಟಕ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿ ಎರಡನೆಯ ದಿನದ ಪ್ರದರ್ಶನ ಕಾಣುತ್ತಿದೆ. 66ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ 'ಕನ್ನಡಕ್ಕಾಗಿ ನಾವು' ವಿಶೇಷ ಅಭಿಯಾನದ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಪರ್ವ ನಾಟಕಕ್ಕೆ, ಸಚಿವ ಸುನಿಲ್ ಕುಮಾರ್ ಚಾಲನೆ ನೀಡಿ ನಾಟಕ ವೀಕ್ಷಿಸಿದ್ರು.ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಸಚಿವರು, ಕೊರೊನಾ ಬಳಿಕ ಮೊದಲ ಸುದೀರ್ಘ ನಾಟಕ ಪರ್ವ ಪ್ರದರ್ಶನಕ್ಕೆ 50 ಲಕ್ಷ ಬಿಡುಗಡೆಗೆ ಮಾಡಲಾಗಿದೆ. ರಂಗಾಯಣ ರಾಜ್ಯವಷ್ಟೇ ಅಲ್ಲ, ದೇಶದಲ್ಲೂ ಹೆಸರುವಾಸಿಯಾಗಿದ ಎಂದರು.
ಕಾರ್ಯಕ್ರಮದ ನಂತರ ಸುನಿಲ್ ಕುಮಾರ್ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ʻಕನ್ನಡಕ್ಕಾಗಿ ನಾವುʼ ಅಭಿಯಾನದ ಹಿನ್ನೆಲೆಯಲ್ಲಿ ತಯಾರಿಸಲಾದ ಭಿತ್ತಿ ಪತ್ರಗಳ ಮತ್ತು ವಿಡಿಯೋಗಳ ಅನಾವರಣ ಹಾಗೂ ಅಭಿಯಾನದ ವಿವಿಧ ವಿಡಿಯೋ ಪ್ರದರ್ಶನದ ಎಲ್.ಇ.ಡಿ ಪರದೆ ಹೊಂದಿರುವ ವಾಹನ ಅನಾವರಣ ಮಾಡಿದರು.
![minister sunil kumar reaction on parva drama show](https://etvbharatimages.akamaized.net/etvbharat/prod-images/n-bng-04-parva-drama-show-inaguration-by-sunil-kumar-script-photos-ka10032_24102021152126_2410f_1635069086_612.jpg)
8 ಗಂಟೆ ಅವಧಿಯ ನಾಟಕ:
ನಾಲ್ಕು ವಿರಾಮಗಳನ್ನು ಒಳಗೊಂಡಿರುವ ಸುಮಾರು 8 ಗಂಟೆ ಅವಧಿಯ ಈ ನಾಟಕವನ್ನು ಖ್ಯಾತ ರಂಗನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ರಂಗರೂಪಕ್ಕಿಳಿಸಿ ನಿರ್ದೇಶನ ಮಾಡಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಪೂರ್ತಿ ಟಿಕೆಟ್ ಮಾರಾಟ:
ಬೆಳಗ್ಗೆ 10 ಗಂಟೆಯಿಂದ ಸಂಜೆ 6.30ರ ತನಕವೂ ನಾಟಕ ನಡೆಯಲಿದ್ದು, ನಡುವೆ ಎರಡು ಚಹಾ ವಿರಾಮ ಹಾಗೂ ಭೋಜನ ವಿರಾಮ ಇರಲಿದೆ. ಇದಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಪರ್ವ ಪ್ರದರ್ಶನಕ್ಕಾಗಿ ಸುಮಾರು ಎರಡು ಲಕ್ಷ ರೂ.ಗಳ ವೆಚ್ಚದಲ್ಲಿ ವೇದಿಕೆ, ಬೆಳಕಿನ ವ್ಯವಸ್ಥೆ ಹಾಗೂ ಸಂಗೀತ ವ್ಯವಸ್ಥೆಯನ್ನು ನವೀಕರಿಸಲಾಗಿದೆ. ರವೀಂದ್ರ ಕಲಾಕ್ಷೇತ್ರವನ್ನು ವಿಶೇಷ ರೀತಿಯಲ್ಲಿ ಶೃಂಗರಿಸಲಾಗಿದ್ದು, ಪೂರ್ತಿ ಟಿಕೆಟ್‌ಗಳು ಮಾರಾಟವಾಗಿದೆ. ಈಗಾಗಲೇ ಮೈಸೂರು ರಂಗಾಯಣದಲ್ಲಿ ಪರ್ವ ನಾಟಕ ಮೂರು ಪ್ರದರ್ಶನ ಕಂಡಿದೆ ಎಂದು ಕಾರ್ಯಪ್ಪ ಹೇಳಿದ್ದಾರೆ.
![minister sunil kumar reaction on parva drama show](https://etvbharatimages.akamaized.net/etvbharat/prod-images/n-bng-04-parva-drama-show-inaguration-by-sunil-kumar-script-photos-ka10032_24102021152126_2410f_1635069086_759.jpg)
ವೈಚಾರಿಕ ದೃಷ್ಟಿಯ ಕಾದಂಬರಿ:
ಮಹಾಭಾರತವನ್ನು ವೈಚಾರಿಕ ದೃಷ್ಟಿಯೊಂದಿಗೆ ಕಟ್ಟಿಕೊಟ್ಟ ಈ ಕಾದಂಬರಿ ವಿದೇಶಿ ಭಾಷೆಗಳಿಗೂ ಅನುವಾದಗೊಂಡಿದ್ದು, ಜನಮನ್ನಣೆ ಪಡೆದಿದೆ. ಎಸ್.ಎಲ್.ಭೈರಪ್ಪನವರ ಬರವಣಿಗೆಯಲ್ಲೆ ಅತ್ಯಂತ ಉತ್ಕೃಷ್ಟ ಕಾದಂಬರಿಗಳಲ್ಲಿ ಒಂದು ಈ 'ಪರ್ವ' ಕಾದಂಬರಿಯಾಗಿದೆ ಎಂದರೇ ತಪ್ಪಾಗಲಾರದು. ಇಂತಹ ಕಾದಂಬರಿ ಈಗ ನಾಟಕದ ಸ್ವರೂಪದಲ್ಲಿ ಜನರ ಮುಂದಿರಿಸುವ ಯತ್ನ ನಡೆದಿದೆ. ಕಾದಂಬರಿಕಾರನಿಗೆ ತನ್ನದೇ ಕರ್ಮಭೂಮಿಯಾದ ನಾಟಕ ಶಾಲೆಯಿಂದ ಮಹಾನ್ ಗೌರವ ನೀಡಲಾಗುತ್ತಿದೆ ಎಂದು ತಿಳಿಸಿದರು.
ಓದುಗರು ರಂಗವೇದಿಕೆಗೆ:
ನಾನು ರಂಗಾಯಣದ ನಿರ್ದೇಶಕನಾದ ದಿನದಿಂದಲೂ ಪರ್ವ ಕಾದಂಬರಿಯನ್ನು ನಾಟಕವನ್ನಾಗಿ ಪ್ರದರ್ಶನ ಮಾಡಬೇಕು ಎನ್ನುವುದು ನನ್ನ ಕನಸಿನ ಯೋಜನೆ ಆಗಿತ್ತು. ಈ ನಾಟಕದ ಮೂಲಕ ಓದುಗರನ್ನು ರಂಗವೇದಿಕೆಗೆ ಕರೆತಂದಿದ್ದೇವೆ ಎಂದು ಮೈಸೂರಿನ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.