ಬೆಂಗಳೂರು: ಕೊರೊನಾ ಸಂದರ್ಭ ನೀಡಬಹುದಾದ ಚಿಕಿತ್ಸೆಯ ಸಂಬಂಧ ತಜ್ಞ ವೈದ್ಯರ ಜೊತೆ ಚರ್ಚಿಸದೇ ಆರೋಗ್ಯ ಸಚಿವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ಇದೀಗ ರಾಜ್ಯ ಸರ್ಕಾರದ ಆರೋಗ್ಯ ಸಚಿವರು ಕೊರೊನಾ ಸಂಕಷ್ಟದ ಈ ಸಮಯದಲ್ಲಿ ತಜ್ಞರ ಮತ್ತು ವೈದ್ಯರ ಸೂಚನೆಗಳ ಅನುಸಾರ ಕಾರ್ಯ ನಿರ್ವಹಿಸದೇ ಹೇಗೆ ಚಿಕಿತ್ಸೆ ನೀಡಬೇಕು ಎಷ್ಟು ಪ್ರಮಾಣದ ಸ್ಟಿರಾಯ್ಡ್ ನೀಡಬೇಕು ಎಂಬುದನ್ನು ತಾವೇ ಹೇಳುತ್ತಿದ್ದಾರೆ. ಇದು ನಿಜಕ್ಕೂ ಇದು ಅಪಾಯಕಾರಿ ಬೆಳವಣಿಗೆ. ಬಹುಶಃ ನಮ್ಮ ರಾಜ್ಯದ ಆರೋಗ್ಯ ಸಚಿವಾಲಯದ ಇತಿಹಾಸದಲ್ಲೇ ನೇರವಾಗಿ ಸಚಿವರೇ ಲೈನ್ ಆಫ್ ಟ್ರೀಟ್ಮೆಂಟ್ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲು ಎಂದು ಕಾಣುತ್ತದೆ. ಇನ್ನೂ ಕೂಡಾ ಕೋವಿಡ್ ಸೋಂಕು ನಿಯಂತ್ರಣಕ್ಕೆ ನೀಡಲಾಗುತ್ತಿರುವ ಲಸಿಕೆಗಳು ಡಬ್ಲ್ಯುಎಚ್ಒ ಅನುಮೋದನೆ ಪಡೆಯದಿದ್ದರೂ ವೈದ್ಯಕೀಯ ವಿಶ್ವಾಸದ ಆಧಾರದಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ ಎಂದಿದ್ದಾರೆ.
ಹೀಗಿರುವಾಗ ಲಸಿಕೆಯು ಯಾವ ರೋಗಿಗೆ ಯಾವ ಪ್ರಮಾಣದಲ್ಲಿ ಕೆಲಸ ಮಾಡುತ್ತದೆ ಎಂಬುದನ್ನು ಆಧರಿಸಿ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಆಯಾ ನಿರ್ದಿಷ್ಟ ಸಂದರ್ಭದ ವಿವೇಚನೆಗೆ ಸಂಬಂಧಿಸಿದಂತೆ ಕೆಲಸ ಮಾಡ್ತಾರೆ. ಈ ಸಂಗತಿಯನ್ನು ಆರೋಗ್ಯ ಸಚಿವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಈ ಸಂಕಷ್ಟ ಕಾಲದಲ್ಲಿ ಆರೋಗ್ಯ ಸಚಿವಾಲಯದಿಂದ ನೀಡಬಹುದಾದ ಆರೋಗ್ಯ ವಿಮೆಯ ಜೊತೆಗೆ ಕೆಲವೊಂದು ಉಪಯುಕ್ತ ಆರೋಗ್ಯ ಸೌಲಭ್ಯಗಳನ್ನು ನೀಡಲು ಮುಖ್ಯಮಂತ್ರಿಗಳಿಗೆ ಸಲಹೆ ನೀಡುವುದರೊಂದಿಗೆ ಜನರಿಗೆ ಅನುಕೂಲಕರವಾಗುವಂತೆ ಸರ್ಕಾರ ಮಾಡಬೇಕಿದೆ ಎಂದು ಮಾಜಿ ಸಚಿವರು ಹೇಳಿದ್ದಾರೆ.