ಬೆಂಗಳೂರು: ರಾಜಾಜಿನಗರದ ESI ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಮರಣ ಪ್ರಮಾಣ ಹೆಚ್ಚಳವಾಗಿದ್ದು, ಇದಕ್ಕೆ ಕಾರಣ ತಿಳಿಯಲು ಸಮಿತಿ ರಚಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.
ಇಂದು ರಾಜಾಜಿನಗರದ ESI ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಮತ್ತು ಕೋವಿಡ್ ಅಲ್ಲದ ರೋಗಗಳಿಗೆ ಇಲ್ಲಿ ನೀಡಲಾಗುತ್ತಿರುವ ಚಿಕಿತ್ಸಾ ವಿಧಾನಗಳ ಪರಿವೀಕ್ಷಣೆ ನಡೆಸಿದರು. ಅಲ್ಲಿನ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಇನ್ನು ಆಸ್ಪತ್ರೆಯಲ್ಲಿ ಈವರೆಗೆ 421 ಕೊರೊನಾ ರೋಗಿಗಳು ದಾಖಲಾಗಿದ್ದು, ಈವರೆಗೆ 54 ಕೊರೊನಾ ರೋಗಿಗಳು ಮೃತ ಪಟ್ಟಿದ್ದಾರೆ. ಮರಣ ಪ್ರಮಾಣ ಶೇ.12.8 ರಷ್ಟಿದೆ ಎಂದು ವೈದ್ಯಾಧಿಕಾರಿಗಳು ಸಚಿವರಿಗೆ ವಿವರಿಸಿದರು.
ಈ ರೀತಿ ಮರಣ ಹೆಚ್ಚಳವಾಗಲು ಕಾರಣ ಪತ್ತೆ ಮಾಡಬೇಕು. ಇದಕ್ಕಾಗಿ ಸಮಿತಿಯೊಂದನ್ನು ರಚಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು. ಇನ್ನು ಕ್ಯಾನ್ಸರ್ ಇರುವ ರೋಗಿಗಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಇನ್ನೂ ಹಲವು ರೋಗಿಗಳು ತಡವಾಗಿ ಬಂದು ದಾಖಲಾಗಿದ್ದಾರೆ. ಹೀಗಾಗಿ ಮರಣ ಪ್ರಮಾಣ ಹೆಚ್ಚಿದೆ. ಮರಣಕ್ಕೆ ಸಂಬಂಧಿಸಿದಂತೆ ಆಡಿಟ್ ವರದಿ ರೂಪಿಸಲು ಆದೇಶಿಸಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ವೈದ್ಯಾಧಿಕಾರಿಗಳು ಹೇಳಿದರು.
ಇಎಸ್ಐ ಆಸ್ಪತ್ರೆಯಲ್ಲಿ 494 ಹಾಸಿಗೆಗಳಿದ್ದು, ಸುಮಾರು 150 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದೆ. ಇಬ್ಬರು ರೋಗಿಗಳ ಸ್ಥಿತಿ ಗಂಭೀರವಾಗಿದೆ. 10 ರೋಗಿಗಳು ಐಸಿಯುನಲ್ಲಿದ್ದು, ಈಗ ಚೇತರಿಸಿಕೊಂಡಿದ್ದಾರೆ ಎಂದರು.
42 ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಚಿಕಿತ್ಸೆ:
ಕೊರೊನಾ ಸೋಂಕಿತರಾಗಿದ್ದ 42 ಗರ್ಭಿಣಿಯರಿಗೆ ಇಎಸ್ಐನಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಆಸ್ಪತ್ರೆಯಲ್ಲಿ ಆರ್ಟಿಪಿಸಿಆರ್ ಲ್ಯಾಬ್ ನಿರ್ಮಿಸಿದ್ದು, ಮುಂದಿನ ವಾರದಿಂದ ಕಾರ್ಯಾರಂಭಿಸಲಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.