ಬೆಂಗಳೂರು: ಕೊರೊನಾ ಎರಡನೇ ಅಲೆ ಎಚ್ಚರಿಕೆಯನ್ನು ಜನ ಗಂಭೀರವಾಗಿ ಪರಿಗಣಿಸಿಲ್ಲ. ಜನನಿಬಿಡದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ನಿನ್ನೆ ಒಂದೇ ದಿನ 34 ಸಾವಿರ ಜನರು ಲಸಿಕೆ ಪಡೆದಿದ್ದಾರೆ. ಇಲ್ಲಿಯವರೆಗೂ 41 ಲಕ್ಷ ಜನ ಲಸಿಕೆ ಪಡೆದಿದ್ದಾರೆ. ಇನ್ನು ಹೆಚ್ಚಿನ ಜನರು ಬಂದು ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಅತಿ ಹೆಚ್ಚು ಜನ ಒಂದೆಡೆ ಸೇರುವುದು, ಮಾಸ್ಕ್ ಧರಿಸದಿರುವುದು ನಮಗೆ ಹತಾಶೆ ತರಿಸಿದೆ. ಸಿನಿಮಾ ಮಂದಿರ, ಮಾರ್ಕೆಟ್ ಬಳಿ ಅನಗತ್ಯವಾಗಿ ಜನರು ಸೇರುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲಿಸುತ್ತಿಲ್ಲ. ಸೋಂಕಿನ ಪ್ರಮಾಣ ಹೆಚ್ಚಾದರೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪಿಎಂ ಕಾರ್ಯದರ್ಶಿ ಜೊತೆ ಸಿಎಂ ಸಭೆ ನಡೆಸುತ್ತಿದ್ದಾರೆ. ವಿಡಿಯೋ ಸಂವಾದದ ಮೂಲಕ ಸಭೆ ನಡೆಯುತ್ತಿದೆ. ಸಂಜೆ ವೇಳೆಗೆ ಹೊಸ ಮಾರ್ಗಸೂಚಿ ಹೊರಬರಲಿದೆ ಎಂದರು.
ಕಳೆದ ಎರಡು ದಿನದಿಂದ ಮೂರು ಸಾವಿರ ಕೇಸ್ ಬರುತ್ತಿದೆ. ನಿನ್ನೆ ಎರಡೂವರೆ ಸಾವಿರ ಕೇಸ್ ಬೆಂಗಳೂರಲ್ಲಿ ದಾಖಲಾಗಿದೆ. ಮೊನ್ನೆಗೆ ಹೋಲಿಸಿದರೆ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಸಿಎಂ ನಿನ್ನೆ ನನ್ನನ್ನು ಮತ್ತು ಮುಖ್ಯ ಕಾರ್ಯದರ್ಶಿಯನ್ನು ಕರೆದು ಮಾತನಾಡಿದರು. ಇಂದು ಸಂಜೆ ಒಳಗೆ ಮಾರ್ಗಸೂಚಿ ಹೊರಡಿಸುತ್ತಾರೆ. ಮಾರ್ಗಸೂಚಿಯಲ್ಲಿ ಎಲ್ಲ ಸ್ಪಷ್ಟನೆ ಸಿಗಲಿದೆ. ಶಿಕ್ಷಣ ಸಚಿವರು ಮಾತನಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ, ನಾನು ಕೊಟ್ಟಿರುವ ಸಲಹೆ ಮೇರೆಗೆ ಸರ್ಕಾರಿ ಆದೇಶ ಬಿಡುಗಡೆಯಾಗಲಿದೆ ಎಂದರು.
6-9 ತರಗತಿ ಮಕ್ಕಳಿಗೆ ಶಾಲೆ ಸ್ಥಗಿತಗೊಳಿಸಿದ್ದನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಸಿಎಂ ವಿರುದ್ಧ ಈಶ್ವರಪ್ಪ ಪತ್ರ ಬರೆದಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸುಧಾಕರ್, ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಸೀನಿಯರ್‌ಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿದ್ದಾರೆ ಎಂದರು.