ಬೆಂಗಳೂರು: ನನಗೆ ವೈದ್ಯಕೀಯ ಖಾತೆ ಕೊಟ್ಟಿರುವುದಕ್ಕೆ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಇಲಾಖೆಯಲ್ಲಿ ಎಲ್ಲಾ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ವೈದ್ಯಕೀಯ ಖಾತೆ ನೀಡಿರುವ ವಿಚಾರವಾಗಿ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಬೇರೆ ಬೇರೆ ಮಾತಾಡಿಕೊಂಡಿದ್ದೆವು. ಈಗ ನಿಮ್ಮ ಮೂಲಕ ವೈದ್ಯಕೀಯ ಇಲಾಖೆ ಎಂದು ಗೊತ್ತಾಗಿದೆ. ನಾನು ಬೇರೆ ಖಾತೆ ಕೇಳಿದ್ದೆ. ಈ ಬಗ್ಗೆ ಬಹಿರಂಗ ಚರ್ಚೆ ಮಾಡಲ್ಲ. ಸಿಎಂ ಬಳಿಯೇ ಮಾತನಾಡುತ್ತೇನೆ. ಆದರೂ ವೈದ್ಯಕೀಯ ಖಾತೆ ನಿಭಾಯಿಸುತ್ತೇನೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರ ಮಾತನಾಡಿದ ನೂತನ ಸಚಿವರು, ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಈ ಸರ್ಕಾರ ಸತ್ತರೆ ಮತ್ತೆ ಅಧಿಕಾರಕ್ಕೆ ಬರಬಹುದು ಅಂತ ತಿಳಿದುಬಕೊಂಡಿದ್ದಾರೆ. ಆದ್ರೆ ಅವರ ಕನಸು ಈಡೇರಲ್ಲ, ಇದು ಸತ್ತ ಸರ್ಕಾರ ಅಲ್ಲ, ಸಕ್ರಿಯ ಸರ್ಕಾರ. ಸಿದ್ದರಾಮಯ್ಯ ಅವರಿಗೆ ಇನ್ನೂ 3 ವರ್ಷ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳುವುದಕ್ಕೆ ಹೇಳಿ. ಕೆಲವು ತಿಂಗಳು ಅವಕಾಶ ಮಾಡಿಕೊಡಿ. ಹೇಗೆ ಕೆಲಸ ಮಾಡುತ್ತೇವೆ ಎಂಬುದನ್ನು ತೋರಿಸುತ್ತೇವೆ ಎಂದರು.
ಜೀವಮಾನದ ಸಂಬಂಧ: ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತು ನನ್ನ ಸಂಬಂಧ ಜೀವಮಾನದ ಸಂಬಂಧ, ಇದು ಬದಲಾಗಲ್ಲ. ಎಂಟಿಬಿಗೆ ಸಚಿವ ಸ್ಥಾನ ಸಿಗುವವರೆಗೂ ನಾನು ಸಚಿವನಾಗಿ ಪ್ರಮಾಣ ವಚನ ತೆಗೆದುಕೊಳ್ಳುವುದಿಲ್ಲ ಎಂದಿದ್ದೆ. ಯಡಿಯೂರಪ್ಪ ಅವರು ಅವರಿಗೂ ಒಳ್ಳೆಯದಾಗುತ್ತೆ ಎಂದ ಮೇಲೆಯೇ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದೆ. ಅವರಿಗೂ ಒಳ್ಳೆಯದಾಗುತ್ತೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಡಾ. ಸುಧಾಕರ್ ತಿಳಿಸಿದರು.