ಬೆಂಗಳೂರು: ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡರ ಜೊತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ.
ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿ ಗಮನ ಸೆಳೆದಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರು, ಹಿರಿಯ ನಾಯಕ ಬಚ್ಚೇಗೌಡ ಇಂದು ಬೆಳಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ನಿವಾಸಕ್ಕೆ ಆಗಮಿಸಿದ್ದರು.
ಈ ವೇಳೆ ಉಪಹಾರದ ಜೊತೆಗೆ ಕೆಲ ಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ರಾಜಕೀಯ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ವಿಧಾನಸಭಾ ಉಪ ಚುನಾವಣೆ ನಂತರ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸೋತು ಸಂಸದ ಬಚ್ಚೇಗೌಡರ ಪುತ್ರ ಶರತ್ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದು ಪಕ್ಷದ ಅಭ್ಯರ್ಥಿ ಸೋಲಿಗೆ ಬಚ್ಚೇಗೌಡರು ಕೂಡ ಕಾರಣ ಎನ್ನುವ ಆರೋಪ ಕೇಳಿ ಬಂದಿತ್ತು. ನಂತರ ಪಕ್ಣದ ನಾಯಕರು ಬಚ್ಚೇಗೌಡರಿಂದ ಅಂತರ ಕಾಯ್ದುಕೊಂಡಿದ್ದರು. ಅದರ ನಡುವೆ ಸಚಿವ ಸುಧಾಕರ್ ಇಂದು ಬಚ್ಚೇಗೌಡರ ಜೊತೆ ಸಭೆ ನಡೆಸಿ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಬಚ್ಚೇಗೌಡ ಅವರೊಂದಿಗೆ ನಡೆದ ಮಾತುಕತೆ ಅವರ ದಶಕಗಳ ರಾಜಕೀಯ ಅನುಭವದೊಂದಿಗೆ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅವರ ವಿಮರ್ಶೆ ಅತ್ಯಂತ ಆಸಕ್ತಿದಾಯಕವಾಗಿತ್ತು ಎಂದು ಸಭೆ ಕುರಿತು ಸಚಿವ ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.