ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಅವರ ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು, ದೇವೇಗೌಡರ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಹಿರಿಯ ಚೇತನ ದೇವೇಗೌಡರು, ಹುಟ್ಟು ಹೋರಾಟಗಾರು, ರೈತ ನಾಯಕರು. ಅವರ ಆರೋಗ್ಯ ವಿಚಾರಿಸಿದೆ. ಮೊಣಕಾಲು ನೋವು ಬಿಟ್ಟರೆ, ಎಲ್ಲ ರೀತಿಯಲ್ಲಿ ಅವರು ಆರೋಗ್ಯವಾಗಿದ್ದಾರೆ. ಅವರನ್ನು ನೋಡಿದರೆ ಭಕ್ತಿ ಭಾವನೆ ಮೂಡಿ ಬರುತ್ತದೆ ಎಂದು ಹೇಳಿದರು.
ನವರಾತ್ರಿ ಮೊದಲನೆಯ ದಿನ ನಾನು ಭೇಟಿ ಕೊಟ್ಟಿದ್ದು ಬಹಳ ಸಂತೋಷವಾಯಿತು. ಅವರ ಮೊಣಕಾಲು ನೋವು ಬೇಗ ನಿವಾರಣೆ ಆಗಲಿ ಎಂದು ದೇವರ ಬಳಿ ಪ್ರಾರ್ಥಿಸುತ್ತೇನೆ. ಅವರ ಮಾನಸಿಕ ಸ್ಥೈರ್ಯ ನಮಗೆ ಖುಷಿ ಕೊಡುತ್ತದೆ. ಪ್ರಧಾನಿಗಳ ಪೈಕಿ ಇವರಷ್ಟು ಸಕ್ರಿಯ ಯಾರು ಇಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೆಗೌಡರನ್ನು ಕೆಳಗಿಳಿಸಿದ್ದು ಕಾಂಗ್ರೆಸ್ : ಕಾಶ್ಮೀರ ದಲ್ಲಿ ಚುನಾವಣೆ ಮಾಡಿದವರು ದೇವೇಗೌಡರು. ಅಲ್ಲದೆ ಈಶಾನ್ಯ ರಾಜ್ಯಗಳಿಗೆ ಆರು ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದರು. ಇವರು ರಷ್ಯಾದ ಪ್ರವಾಸದಲ್ಲಿ ಇದ್ದಾಗ ಅಧಿಕಾರದಿಂದ ಕೆಳಗೆ ಇಳಿಸಿದ್ರು. ಈ ಬಗ್ಗೆ 26 ವರ್ಷವಾದರೂ ಇನ್ನೂ ಕಾಂಗ್ರೆಸ್ ಕಾರಣ ಕೊಟ್ಟಿಲ್ಲ. ನಾನು ಹೇಳಿದ್ದು ಸರಿಯೋ ತಪ್ಪೋ ಅವರೇ ಹೇಳಲಿ ಎಂದು ತಿರುಗೇಟು ನೀಡಿದರು.
ಬಸವರಾಜ್ ಬೊಮ್ಮಾಯಿ ಅವರನ್ನು ಗುರಿಯಾಗಿಸಲಾಗುತ್ತಿದೆ : ಭ್ರಷ್ಟಾಚಾರಕ್ಕೆ ಜಾತಿ ಮುಖ್ಯ ಅಲ್ಲ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಲಾಗುತ್ತಿದೆ. ಹದಿನೈದು ಗಂಟೆಗಳ ಕಾಲ ಬೊಮ್ಮಾಯಿ ಅವರು ಕೆಲಸ ಮಾಡುತ್ತಾರೆ. ಇವರನ್ನು ಮುಂದಿಟ್ಟುಕೊಂಡರೆ ನಮಗೆ ಕಷ್ಟ ಎಂದು ಅವರನ್ನು ಗುರಿಯಾಗಿಸುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದರು.
ಆ್ಯಂಬುಲೆನ್ಸ್ ವಿಚಾರವಾಗಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಸಕ್ರಿಯ ಸರ್ಕಾರ ಇರುವುದರಿಂದಲೇ ತಕ್ಷಣವೇ ಕ್ರಮ ಕೈಗೊಂಡಿರುವುದು. ಸಕ್ರಿಯ ಸರ್ಕಾರ ಇಲ್ಲದಿದ್ದರೆ ಹೀಗೆ ಆಗುತ್ತಿತ್ತಾ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ : ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಆರೋಗ್ಯ ವಿಚಾರಿಸಿದ ಡಿಕೆಶಿ