ಬೆಂಗಳೂರು: ನನಗೆ ಇದುವರೆಗೂ ಯಾರು ಬ್ಲಾಕ್ಮೇಲ್ ಮಾಡಿಲ್ಲ. ಇಷ್ಟು ವರ್ಷ ರಾಜಕಾರಣದ ಮಾಡಿಕೊಂಡು ಬಂದಿದ್ದೇನೆ. ಕ್ಷಣಮಾತ್ರದಲ್ಲಿ ಟಿವಿಯಲ್ಲಿ ಏನೋ ಬಂದರೆ ಹೇಗೆ. ಯಾವುದೇ ರೀತಿಯಲ್ಲಿ ನಮ್ಮ ತೇಜೋವಧೆ ಆಗಬಾರದು ಎಂದು ನಾವುಗಳು ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ವಿರುದ್ಧ ಮಾತನಾಡಲೇಬಾರದು ಅಂತಲ್ಲ. ನನ್ನ ಇಲಾಖೆಯ ಬಗ್ಗೆ ನನ್ನ ಬಗ್ಗೆ ಟೀಕೆ ಮಾಡಬಹುದು. ಆದರೆ ವೈಯಕ್ತಿಕವಾಗಿ ತೇಜೋವಧೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಅಧಿವೇಶನ ನಡೆಯುವ ಸಮಯದಲ್ಲಿ ನಮ್ಮನ್ನು ಟಾರ್ಗೆಟ್ ಮಾಡುವ ಗುಮಾನಿ ಇತ್ತು.
ಬಜೆಟ್ ಮುಗಿದ ಬಳಿಕ ಯಾವ ಕಾರಣಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂಬುದರ ಬಗ್ಗೆ ಹೇಳುತ್ತೇವೆ. ನಾವು ಆರು ಜನ ಕೋರ್ಟ್ಗೆ ಅರ್ಜಿ ಹಾಕಿದ್ದೇವೆ. ಇವತ್ತು ಅಥವಾ ಸೋಮವಾರ ಉಳಿದ ಸಚಿವರಿಂದಲೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ವಿಡಿಯೋ ಪ್ರಕರಣ ನಮಗೆ ಭೀತಿ ತಂದಿಲ್ಲ. ಆ ರೀತಿ ನಾವು ಯೋಚನೆ ಮಾಡಲೇ ಇಲ್ಲ. ನೀವು ಕೂಡ ಹಾಗ್ಯಾಕೆ ಯೋಚನೆ ಮಾಡ್ತೀರಿ ಎಂದು ಮಾಧ್ಯಮದವರನ್ನು ಪ್ರಶ್ನೆ ಮಾಡಿದರು. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು. ನಾನು ಗೃಹ ಮಂತ್ರಿಗಳ ಜೊತೆ ಸಹ ಮಾತನಾಡಿದ್ದೇನೆ ಎಂದರು.