ಬೆಂಗಳೂರು: ಸಹಕಾರ ಸಚಿವರು ಹಾಗೂ ರಾಜರಾಜೇಶ್ವರಿ ವಲಯ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಹಲವು ಆರೋಗ್ಯ ಸಮುದಾಯ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
![ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಭೇಟಿ](https://etvbharatimages.akamaized.net/etvbharat/prod-images/ka-bng-6-st-somsekar-visit-primary-heath-center-ka10012_21072020213515_2107f_1595347515_536.jpg)
ಭೇಟಿ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಹಾಗೂ ಸಮಸ್ಯೆಗಳ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮೊದಲು ಕೆಂಗೇರಿ ಕೋಟೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಹೊರ ರೋಗಿಗಳ ಸಹಿತ ಕೋವಿಡ್ ಸೋಂಕಿತರಿಗೆ ಯಾವ ರೀತಿ ವ್ಯವಸ್ಥೆ ಮಾಡಲಾಗಿದೆ ಎಂದು ಪರಿಶೀಲನೆ ನಡೆಸಿದರು.
ಬಳಿಕ ಕೆಂಗೇರಿ ಉಪವಲಯದ ಪ್ರಾಥಮಿಕ ಆರೋಗ್ಯ ಕೇಂದ್ರ, ಉಲ್ಲಾಳು ಉಪನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಹೇರೋಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಿಪ್ಪೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿಗಳನ್ನು ಕೂಲಂಕಷವಾಗಿ ಅವಲೋಕಿಸಿದರು.
![ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಭೇಟಿ](https://etvbharatimages.akamaized.net/etvbharat/prod-images/ka-bng-6-st-somsekar-visit-primary-heath-center-ka10012_21072020213515_2107f_1595347515_718.jpg)
ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಹಾಗೂ ಹೋಮ್ ಐಸೋಲೇಶನ್ ಕೇಂದ್ರಗಳಿಗೆ ನಿರಂತರ ಭೇಟಿ ಕೊಡಲಾಗುತ್ತಿದೆಯೇ?. ಅವರಿಂದ ಯಾವುದೇ ದೂರುಗಳು ಬರುತ್ತಿಲ್ಲವೇ?. ಡಿ ಗ್ರೂಪ್ ನೌಕರರು ಹಾಗೂ ನರ್ಸ್ ಸೇರಿದಂತೆ ಸಿಬ್ಬಂದಿ ಕೊರತೆ ಇದೆಯೇ? ಎಂಬಿತ್ಯಾದಿ ಸಮಸ್ಯೆಗಳ ಬಗ್ಗೆ ಸಚಿವರು ಖುದ್ದು ಮಾಹಿತಿ ಪಡೆದುಕೊಂಡರು. ಅಲ್ಲದೆ ನಾನ್ ಕೋವಿಡ್ ರೋಗಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ದೂರುಗಳು ಬರಬಾರದು. ವೈದ್ಯರು ಹಾಗೂ ಸಿಬ್ಬಂದಿ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಮುಂದೆ ದೂರುಗಳು ಬರದಂತೆ ಕಾರ್ಯನಿರ್ವಹಿಸಿ ಎಂದು ಸಚಿವರು ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.