ಬೆಂಗಳೂರು: ಖಾತೆ ಬದಲಾವಣೆ ಸಂಬಂಧ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವ ಶ್ರೀರಾಮುಲು ಸಿಎಂರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಸುಮಾರು 15 ನಿಮಿಷಗಳ ಕಾಲ ಸಿಎಂ ಜೊತೆ ಚರ್ಚೆ ನಡೆಸಿದ ಶ್ರೀರಾಮುಲು, ಕೋವಿಡ್ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಿದರೆ, ಜನರಿಗೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ಸಿಎಂ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಉಪಚುನಾವಣೆ ಬಳಿಕ ಸಂಪುಟ ಪುನಾರಚನೆ ನಡೆಯಲಿದೆ. ಆ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬಹುದಾಗಿತ್ತು. ಈಗ ಏಕಾಏಕಿ ಆರೋಗ್ಯ ಖಾತೆಯಿಂದ ಕೊಕ್ ನೀಡಿರುವುದು ಸಮಂಜಸವಲ್ಲ. ಕೋವಿಡ್ ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸುವಲ್ಲಿ ಶ್ರೀರಾಮುಲು ವಿಫಲರಾಗಿದ್ದಾರೆ. ಅದಕ್ಕಾಗಿ ಖಾತೆ ಬದಲಾವಣೆ ಮಾಡಲಾಗಿದೆ ಎಂಬ ಸಂದೇಶ ಹೋಗುತ್ತದೆ. ಹೀಗಾಗಿ ಖಾತೆ ಬದಲಾವಣೆ ಸದ್ಯಕ್ಕೆ ಬೇಡ ಎಂದು ಸಿಎಂರಲ್ಲಿ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಕಾವೇರಿ ನಿವಾಸದಲ್ಲಿ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಇದ್ದ ಶ್ರೀರಾಮುಲು ಬಳಿಕ ಅಲ್ಲಿಂದ ತೆರಳಿದರು. ಸಿಎಂ ನಿವಾಸದಿಂದ ತೆರಳುವ ವೇಳೆ ಮಾಧ್ಯಮದವರಿಗೆ ಕೈಮುಗಿದು, ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದರು.