ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಶನಿವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಪ್ರಚಾರ ಮತ್ತು ನಿರ್ವಹಣಾ ಸಮಿತಿ ಸಭೆ ನಡೆಯಿತು. ಈ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ "ರಾಷ್ಟ್ರಾಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ವಹಣೆ ಸಮಿತಿಯಲ್ಲಿರುವ 14 ಸದಸ್ಯರು ಭಾಗಿಯಾಗಿದ್ದರು. ಚುನಾವಣಾ ತಯಾರಿ ಕುರಿತು ನಡ್ಡಾ ಹಲವು ಸಲಹೆಗಳನ್ನು ನೀಡಿದ್ದಾರೆ. ಅದರಂತೆ ನಾವು ಕೆಲಸ ಮಾಡುತ್ತೇವೆ" ಎಂದರು.
"ದೇಶದ ಬೇರೆ ಬೇರೆ ಕಡೆ ಪಕ್ಷ ಹೇಗೆ ಚುನಾವಣಾ ಎದುರಿಸಿತ್ತು. ಅಲ್ಲೆಲ್ಲ ಪ್ರಚಾರ ಕಾರ್ಯ ಹೇಗಿದ್ದವು. ಹೀಗೆ ಸಾಕಷ್ಟು ವಿಚಾರಗಳನ್ನು ನಮಗೆ ಸಭೆಯಲ್ಲಿ ತಿಳಿಸಿದರು. ಮುಖ್ಯವಾಗಿ ಚುನಾವಣಾ ಆಯೋಗದ ಜತೆಗೆ ಕಾನೂನು ಪ್ರಕಾರ ಕೆಲಸ ಮಾಡುವುದನ್ನು ಹೇಳಿದ್ದಾರೆ. ನಾವು ಅವರು ಹೇಳಿದ ಹಾಗೇ ಕೆಲಸ ಮಾಡುತ್ತೇವೆ" ಎಂದು ತಿಳಿಸಿದರು.
ಚುನಾವಣೆ ಎದುರಿಸಲು ಸಲಹೆ: ಒಟ್ಟು ಚುನಾವಣೆ ನಿರ್ವಹಣೆಗೆ 32 ಸಮಿತಿಗಳನ್ನು ರಚಿಸಿದ್ದು, ಈ ಸಮಿತಿಗಳ ಸಭೆಯನ್ನು ನಡ್ಡಾ ನಡೆಸಿದ್ದಾರೆ. ಒಂದೊಂದು ಸಮಿತಿ ಮಾಡಬೇಕಾದ ಜವಾಬ್ದಾರಿ, ಕರ್ತವ್ಯವನ್ನು ತಿಳಿಸಿದ್ದಾರೆ. ದೇಶದ ಬೇರೆ ಬೇರೆ ಕಡೆ ನಮ್ಮ ಕಾರ್ಯ, ಅದರ ಯಶಸ್ಸಿನ ಕುರಿತು ತಿಳಿಸಿದ ಅವರು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಚುನಾವಣೆ ನಿರ್ವಹಿಸಲು ತಿಳಿಸಿದ್ದಾರೆ. ಕಾನೂನು ಪಾಲನೆ ಜತೆ ಚುನಾವಣೆ ಎದುರಿಸಲು ಸಲಹೆ ನೀಡಿದ್ದಾರೆ. ಅವರ ಮಾರ್ಗದರ್ಶನದಂತೆ ಈ ಸಮಿತಿ ಕಾರ್ಯ ನಿರ್ವಹಿಸಲಿದೆ. ಬೂತ್ ಬಲಪಡಿಸುವುದು, ಪ್ರಚಾರ ಕಾರ್ಯ ಹೆಚ್ಚಳ, ಕರಪತ್ರ ಹಂಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯನ್ನು ಮನೆ ಮನೆಗೆ ತಿಳಿಸುವುದು, ಒಂದೆರಡು ಬಾರಿ ಜನರನ್ನು ಖುದ್ದಾಗಿ ಭೇಟಿ ಮಾಡಲು ಸಲಹೆ ಕೊಟ್ಟಿದ್ದಾರೆ. ಅವರ ಸಲಹೆಯಂತೆ ನಡೆದು ಜನರನ್ನು ತಲುಪುತ್ತೇವೆ. ಅಲ್ಲದೆ ಕಾನೂನಿನಂತೆ ನಡೆದುಕೊಳ್ಳುವುದಾಗಿ ಅವರಿಗೆ ಭರವಸೆ ಕೊಟ್ಟಿದ್ದಾಗಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾದ ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಭಾಗವಹಿಸಿದ್ದರು. ಉಳಿದಂತೆ ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಅಶ್ವತ್ಥ ನಾರಾಯಣ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಶಾಸಕ ಅರವಿಂದ ಲಿಂಬಾವಲಿ ಹಾಗೂ ಎಂಎಲ್ಸಿ ರವಿ ಕುಮಾರ್ ಭಾಗವಹಿಸಿದ್ದರು.
ಜೆ.ಪಿ.ನಡ್ಡಾ ರೋಡ್ ಶೋ: ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ತುಮಕೂರಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾ.ನಿನ್ನೆ(ಮಾ.18) ನಗರದಲ್ಲಿ ರೋಡ್ ಶೋ ನಡೆಸಿದ್ದಾರೆ. ರೋಡ್ ಶೋನಲ್ಲಿ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ರೋಡ್ ಶೋನಲ್ಲಿ ನಡ್ಡಾರೊಂದಿಗೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೇರಿದಂತೆ ಪಕ್ಷದ ನಾಯಕರು ಭಾಗಿಯಾಗಿದ್ದರು.
ಇದನ್ನೂ ಓದಿ: ತುಮಕೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ.. ಜೆಪಿ ನಡ್ಡಾ ರೋಡ್ ಶೋ