ಬೆಂಗಳೂರು: ಸಂಸದ ಅನಂತ ಕುಮಾರ್ ಹೆಗಡೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಟ್ರೀಟ್ಮೆಂಟ್ ಕೊಡಿಸಲಿ ಇಲ್ಲಾಂದ್ರೆ ನಾವು ಕೊಡಿಸ್ತೇವೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅನಂತ್ ಕುಮಾರ್ ಹೆಗಡೆ ಹುಚ್ಚ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ ಎಂದು ಈಗ ಸಾಬೀತಾಯಿತು. ಬಿಜೆಪಿ ರಾಜ್ಯಾಧ್ಯಕ್ಷರೇ ಅವರ ಮಾತಿಗೆ ನಾವು ಬೆಲೆ ಕೊಡಲ್ಲ. ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಆತ ಬಿಜೆಪಿಯೊಳಗಿರುವ ಹುಚ್ಚ, ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸುವ ಕೆಲಸ ಮಾಡಿ. ಅವರ ಹೇಳಿಕೆ ಬಗ್ಗೆ ಕ್ರಮಕ್ಕೆ ಸಿಎಂ ಗೃಹ ಸಚಿವರು ನಿರ್ಧಾರ ಮಾಡ್ತಾರೆ ಎಂದರು.
ಕಾಂತರಾಜು ವರದಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಂತರಾಜು ರಿಪೋರ್ಟ್ ಸ್ವೀಕಾರ ಮಾಡಲು ಸರ್ಕಾರ ಸಿದ್ಧವಿದೆ. ಜನವರಿ 31ರ ಒಳಗೆ ಕಾಂತರಾಜು ರಿಪೋರ್ಟ್ ತೆಗೆದುಕೊಳ್ಳುತ್ತೇವೆ. ರಿಪೋರ್ಟ್ ಕೊಡಲು ಸೂಚಿಸಿದ್ದೇವೆ. ಆಯೋಗದ ಅವಧಿ ಜನವರಿ 31ವರೆಗೂ ಇದೆ. ಅದರ ಒಳಗೆ ವರದಿ ಕೊಡುವಂತೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಕೊಟ್ರೆ ನಾವು ವರದಿ ತೆಗೆದುಕೊಳ್ಳುತ್ತೇವೆ. ವರದಿ ನೋಡೋಣ, ಓದೋಣ ಬಳಿಕ ಆ ಬಗ್ಗೆ ಚರ್ಚೆ ಮಾಡೋಣ. ಇದು ಜಾತಿಗಣತಿ ಅಲ್ಲ. ಇದು ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯ ವರದಿ ಎಂದು ಹೇಳಿದರು.
ಮುಂದುವರೆದು, ಇದು ಯಾರ ವಿರುದ್ಧ ಇರುವ ವರದಿಯಲ್ಲ. ಯಾರ ವಿರೋಧವೂ ಇಲ್ಲ. ಕಾಂತರಾಜು ರಿಪೋರ್ಟ್ ಸ್ವೀಕಾರ ಮಾಡುವುದರಲ್ಲಿ ತಪ್ಪಿಲ್ಲ. ಸ್ವೀಕಾರ ಮಾಡುವಂತೆ ಒತ್ತಾಯ ಮಾಡುವುದು ಸಹ ತಪ್ಪಲ್ಲ. ಕಾಂತರಾಜು ರಿಪೋರ್ಟ್ನ್ನು ಜಯಪ್ರಕಾಶ್ ಹೆಗ್ಡೆಯವರು ಕೊಟ್ಟಾಗ ತೆಗೆದುಕೊಳ್ಳುತ್ತೇವೆ. ಮತ್ತೆ ಅವಧಿ ವಿಸ್ತರಣೆ ಯೋಚನೆ ಸರ್ಕಾರದ ಮುಂದೆ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಅನಂತ್ಕುಮಾರ್ ಹೆಗಡೆ ಹೇಳಿಕೆ ಸಮರ್ಥನೀಯವಲ್ಲ; ಸ್ವ-ಪಕ್ಷದವರಿಂದ ಬೇಸರ