ಬೆಂಗಳೂರು: ಕೊನೆಗೂ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಆಪ್ತರೊಂದಿಗೆ ವಿದೇಶಕ್ಕೆ ತೆರಳಿದ್ದಾರೆ. ಈ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಲವು ದಿನಗಳ ಹಿಂದೆಯೇ ವಿದೇಶ ಪ್ರವಾಸ ಕೈಗೊಳ್ಳುವುದಾಗಿ ಅವರು ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ದಸರಾ ವೇಳೆ ಆಪ್ತ ಶಾಸಕರೊಂದಿಗೆ ಯೋಜಿಸಿದ್ದ ಮೈಸೂರು ಟ್ರಿಪ್ಗೆ ಹೈಕಮಾಂಡ್ ಕಡಿವಾಣ ಹಾಕಿತ್ತು.
ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ನಡುವಿನ ಆಂತರಿಕ ಅಸಮಾಧಾನ ತಣ್ಣಗಾದಂತಿತ್ತು. ಆದರೆ ಇದೀಗ ದುಬೈ ಪ್ರವಾಸ ಕೈಗೊಂಡಿರುವುದು ಅಚ್ಚರಿ ಉಂಟುಮಾಡಿದೆ. ಶುಕ್ರವಾರ ತಡರಾತ್ರಿ ಅವರು ದುಬೈಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮುಂಚೆ ತಮ್ಮ ಆಪ್ತ ಶಾಸಕರ ಜೊತೆಗೂಡಿ ಸತೀಶ್ ದುಬೈಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೀಗ ಶಾಸಕರ ಬದಲು ತಮ್ಮ ಆಪ್ತರೊಂದಿಗೆ ಪ್ರವಾಸ ತೆರಳಿದ್ದಾರೆ. ಸತೀಶ್ ಜಾರಕಿಹೊಳಿ ಮಾಜಿ ಶಾಸಕರನ್ನು ದುಬೈಗೆ ಕರೆದೊಯ್ಯುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಲು ಯತ್ನಿಸಿತ್ತು.
ಇದನ್ನೂ ಓದಿ: ಸಚಿವ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ ಹೆಗಲಿಗೆ ಕೈ ಹಾಕಿಕೊಂಡು ಸಂಪುಟ ಸಭೆಗೆ ಬಂದ ಡಿಕೆಶಿ
ದಸರಾ ವೇಳೆ 20 ಶಾಸಕರೊಂದಿಗೆ ಒಟ್ಟಾಗಿ ಮೈಸೂರಿಗೆ ತೆರಳಲು ಸಚಿವ ಸತೀಶ್ ಜಾರಕಿಹೊಳಿ ಮುಂದಾಗಿದ್ದರು. ಅದಕ್ಕಾಗಿ ಬಸ್ ಕೂಡ ಸಿದ್ಧಪಡಿಸಿದ್ದರು. ಆದರೆ ಈಗಾಗಲೇ ಕೈ ಶಾಸಕರಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಇದೆ ಎಂಬ ಕೂಗು ಕೇಳಿ ಬರುತ್ತಿದೆ. ಈ ಮಧ್ಯೆ ಶಾಸಕರು ಪ್ರವಾಸ ಮಾಡಿದ್ರೆ ಬೇರೆ ಸಂದೇಶ ರವಾನೆಯಾಗುತ್ತದೆ ಎಂದು ಎಐಸಿಸಿ ಇವರ ಟ್ರಿಪ್ಗೆ ತಡೆಯೊಡ್ಡಿತ್ತು. ಆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ, ಜಾರಕಿಹೊಳಿ, ಸಮಾನ ಮನಸ್ಕ ಶಾಸಕರು ದಸರಾ ಆಚರಣೆಗಾಗಿ ಮೈಸೂರಿಗೆ ಹೋಗುತ್ತಿದ್ದೆವು ಅಷ್ಟೇ. ಪಕ್ಷದಲ್ಲಿ ಯಾವುದೇ ಅಸಮಾಧಾನ, ಬಣಗಿಣ ಅಂತ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇನ್ನು ಸಿಎಂ ಸಿದ್ದರಾಮಯ್ಯ ಅವರು ಆಯೋಜಿಸಿದ್ದ ಸಚಿವರ ಬ್ರೇಕ್ಫಾಸ್ಟ್ ಮೀಟಿಂಗ್ಗೂ ಸತೀಶ್ ಜಾರಕಿಹೊಳಿ ಗೈರಾಗಿದ್ದರು. ಆ ಬಳಿಕ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಸರ್ಕಾರಿ ನಿವಾಸಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಮೂಲಕ ಅಸಮಾಧಾನ ಶಮನಕ್ಕೆ ಮುಂದಾಗಿದ್ದರು. ಈ ವೇಳೆ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಚರ್ಚಿಸಿದ್ದರು. ಹಾಗೆಯೇ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸುವ ವೇಳೆ ಸತೀಶ್ ಜಾರಕಿಹೊಳಿ ಹೆಗಲ ಮೇಲೆ ಡಿಸಿಎಂ ಕೈ ಹಾಕಿ ನಡೆದು ಬಂದಿದ್ದು ಗಮನ ಸೆಳೆದಿತ್ತು.