ಬೆಂಗಳೂರು : ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಜಾತ್ರೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜಾತ್ರೆಗಳು ನಡೆದರೆ ಆಯಾ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಕೋವಿಡ್ ಪರಿಸ್ಥಿತಿ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆ ವಿಕಾಸಸೌಧದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಜಾತ್ರೆಗಳಿಗೆ ಅವಕಾಶವಿಲ್ಲ. ಒಂದು ವೇಳೆ ಅವಕಾಶ ಕೊಟ್ಟರೆ ಡಿಸಿ, ಎಸ್ಪಿ ಅವರನ್ನು ಡಿಸ್ಮಿಸ್ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪಾಸ್ ಕಡ್ಡಾಯ : ಜನಸಂದಣಿ ಆಗದಂತೆ ಎಲ್ಲಾ ರೀತಿಯ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುತ್ತಿದ್ದು, ಇನ್ನು ಮುಂದೆ ಮದುವೆ ಸಮಾರಂಭಗಳಿಗೆ ಪಾಸ್ ಕಡ್ಡಾಯವಾಗಿದೆ. ಒಳಾಂಗಣದಲ್ಲಿ 100 ಜನರಿಗೆ ಅವಕಾಶವಿದೆ. ಹೊರಾಂಗಣದಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಮದುವೆಗೆ ಮುನ್ನ ಸಮೀಪದ ಠಾಣೆಯಲ್ಲಿ ಪಾಸ್ ಪಡೆಯಬೇಕು ಎಂದು ತಿಳಿಸಿದರು.
ಈಗಾಗಲೇ ಬುಕ್ ಆಗಿರುವ ಮದುವೆಗಳಿಗೆ ಪಾಸ್ ನಿಯಮ ಅನ್ವಯವಿಲ್ಲ. ಮುಂದಿನ ದಿನಗಳಲ್ಲಿ ಬುಕ್ ಆಗುವ ಮದುವೆಗಳಿಗೆ ಪಾಸ್ ಕಡ್ಡಾಯ. ಹೊಸದಾಗಿ ನಡೆಯುವ ಮದುವೆಗಳಿಗೆ ಪಾಸ್ ಅಗತ್ಯ. ರಾಜಕೀಯ ಸಭೆ, ಸಮಾರಂಭಗಳಿಗೂ ಇದು ಅನ್ವಯ ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲಿಯೂ ಆ್ಯಕ್ಸಿಜನ್ ಸಮಸ್ಯೆ ಆಗಬಾರದು. ಯಾವುದೇ ಕಾರಣಕ್ಕೂ ಕೋವಿಡ್ ಸೋಂಕಿರಿಗೆ ಬೆಡ್ ಕೊರತೆ ಆಗಬಾರದು. ಎಲ್ಲಾ ಕಡೆ ಈಗಿನಿಂದಲೇ ಬೆಡ್ ವ್ಯವಸ್ಥೆ ಆಗಬೇಕು. ಕೊವೀಡ್ ನಿರ್ವಹಣೆಗೆ ಡಿಸಿಗಳು ಕೇಳಿದ್ದ ಹಣ ಬಿಡುಗಡೆ ಮಾಡಲಾಗುವುದು. ಕೋವಿಡ್‌ನಿಂದ ಮೃತಪಟ್ಟವರನ್ನು ಗೌರವ ಯುತವಾಗಿ ಅಂತ್ಯ ಸಂಸ್ಕಾರ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಡಿಸಿಗಳೊಂದಿಗೆ ಇಂದು ಚರ್ಚೆ ನಡೆಸಲಾಗಿದೆ. ಬೆಂಗಳೂರಿಗೆ ಸಂಬಂಧಿಸಿ ಸೋಮವಾರ ಸಭೆ ನಡೆಸಲಾಗುವುದು. ರಾಜಧಾನಿಯಲ್ಲಿ ಸೋಂಕು ಹೆಚ್ಚಳ ಸಂಬಂಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕೂ ಮುನ್ನ ಶಾಸಕರು, ಸಂಸದರ ಜತೆ ಚರ್ಚಿಸಿ ಕಠಿಣಕ್ರಮ ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ಸೋಂಕಿನ ತೀವ್ರತೆ ಗಮನಿಸಿದರೆ ಕಳೆದ ಬಾರಿ ಕೇಸ್‌ಗಿಂತ ಈ ಬಾರಿ ಹೆಚ್ಚು ಆಗಬಹುದು. ಬೇರೆ ದೇಶಗಳಲ್ಲಿ ಮೂರನೇ ಅಲೆ ಕಾಣಿಸಿದೆ. ಹೀಗಾಗಿ, ನಾವು ಆ ಹಂತಕ್ಕೆ ಹೋಗಬಾರದು. ಯುದ್ಧೋಪಾದಿ ಮಾದರಿ ಕ್ರಮ ಜರುಗಿಸುತ್ತೇವೆ. ಎರಡನೇ ಅಲೆಯನ್ನ ನಿಯಂತ್ರಿಸಬೇಕು ಅದಕ್ಕೆ ಯಾವುದೇ ಸಮಸ್ಯೆ ಆಗಬಾರದು.
ಡೇಟಾ ಎಂಟ್ರಿ ಸಮಸ್ಯೆ ಆಗಬಾರದು. ಸಿಬ್ಬಂದಿಗೆ ವೇತನ ಸಮಸ್ಯೆ ಆಗಬಾರದು. ಕೇಳಿದಷ್ಟು ಹಣ ನೀಡುತ್ತೇವೆ. ಕೋವಿಡ್ ರೋಗಿಗಳ ಶವ ಸಂಸ್ಕಾರ ಗೌರವಯುತವಾಗಿ ನಡೆಯಬೇಕು ಎಂದು ಸಚಿವ ಆರ್. ಅಶೋಕ್ ಹೇಳಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಏಪ್ರಿಲ್ 20ರವರೆಗೆ ರಾಜಧಾನಿ ಸೇರಿದಂತೆ 7 ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ಮಾತ್ರ ಕರ್ಫ್ಯೂ ಇದೆ. ಏಪ್ರಿಲ್ 20ರ ಬಳಿಕ ಮತ್ತಷ್ಟು ಬಿಗಿ ಕ್ರಮಕೈಗೊಳ್ಳುವ ಕುರಿತು ವಿಚಾರ ಮಾಡಲಾಗಿದೆ ಎಂದರು.
ಸದ್ಯಕ್ಕೆ ಇಂದು ಸಭೆ ಮಾಡಿ, ಇಷ್ಟು ಕ್ರಮ ಮಾಡಿದ್ದೇವೆ. ಸಿಎಂ ಯಡಿಯೂರಪ್ಪ ಅವರು ಗುಣಮುಖರಾದ ನಂತರ ಮತ್ತೆ ಸಭೆ ನಡೆಸಿ, ಅವಾಗ ಮತ್ತಷ್ಟು ಬಿಗಿ ಕ್ರಮ ಮಾಡುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಗೃಹ ಸಚಿವರು ತಿಳಿಸಿದರು.
ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ಮುಖ್ಯಮಂತ್ರಿಗಳು ಶೀಘ್ರ ಗುಣಮುಖರಾಗಿ ಹೊರ ಬರುತ್ತಾರೆ. ಅವರು ಬಂದ ಬಳಿಕ ಬೆಂಗಳೂರು ಶಾಸಕರ ಜೊತೆ ಸಭೆ ಮಾಡಬೇಕು. ನಂತರ ಪ್ರತ್ಯೇಕ ಮಾರ್ಗಸೂಚಿ ತೆಗೆದುಕೊಳ್ಳುತ್ತೇವೆ.
ಬೆಂಗಳೂರಿನಲ್ಲಿ ಎಂಟು ವಲಯ ಮಾಡಿದ್ದೇವೆ. ಅಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಎಲ್ಲಿಯೂ ಬೆಡ್ ಸಮಸ್ಯೆ ಎದುರಾಗಿಲ್ಲ. ಅಂತಹ ಆಸ್ಪತ್ರೆಗಳಿದ್ದರೆ ತಿಳಿಸಿ ಎಂದರು.