ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಅವರದ್ದು ಎನ್ನಲಾದ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಈ ಕುರಿತಂತೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ. ಕಟೀಲ್ ಅವರ ಆಡಿಯೋ ಸುಳ್ಳು, ಇದು ಕಾಂಗ್ರೆಸ್ನವರು ಮಾಡಿರುವ ಕುತಂತ್ರ ಎಂದು ಸಚಿವ ಆರ್.ಅಶೋಕ್ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರಿಗೆ ಮಸಿ ಬಳಿಯಲು ನಡೆದಿರುವ ಕುತಂತ್ರ ಇದು ಎಂದರು.
ಕಾಂಗ್ರೆಸ್ ನಾಯಕರು ಬಿಎಸ್ವೈಗೆ ಬೆಂಬಲ ನೀಡಲು ಮುಂದೆ ಬರುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, ಕಾಂಗ್ರೆಸ್ನವರು ಈ ಕುತಂತ್ರ ನಿಲ್ಲಿಸಬೇಕು. ನಮ್ಮ ಹೈ ಕಮಾಂಡ್ ನಾಯಕತ್ವ ಬದಲಾವಣೆ ಮಾಡುವ ಬಗ್ಗೆ ಏನೂ ಹೇಳಿಲ್ಲ. ಹಾಗೇನಾದರೂ ಇದ್ರೆ ಅದು ನಮ್ಮ ಆಂತರಿಕ ವಿಚಾರ. ಕಾಂಗ್ರೆಸ್ ಸಿಂಪತಿ ನಮಗೆ ಬೇಕಿಲ್ಲ. ವಲಸೆ ಸಚಿವರು ಸಭೆ ಸೇರಿದ್ದು ಸುಳ್ಳು ಎಂದು ತಿಳಿಸಿದ್ರು.
ವೀರೇಂದ್ರ ಪಾಟೀಲರಿಗೆ ಅನಾರೋಗ್ಯ ಆಗಿದ್ದಾಗ ಶಾಮನೂರು ಎಲ್ಲಿದ್ರು?: ಸಚಿವ ವಿ.ಸೋಮಣ್ಣ
ಹಿಂದೆ ವೀರೇಂದ್ರ ಪಾಟೀಲರಿಗೆ ಅನಾರೋಗ್ಯ ಆಗಿದ್ದಾಗ ಹಾಲಿ ಕಾಂಗ್ರೆಸ್ ಶಾಸಕ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎಲ್ಲಿದ್ರು ಎಂದು ಸಚಿವ ವಿ.ಸೋಮಣ್ಣ ಪ್ರಶ್ನಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕಪ್ಪಗೆ ಯಾರು ಹೇಳಿದ್ದು?. ಸಿಎಂ ಬದಲಾವಣೆ ಸದ್ಯ ಯಾರೂ ಹೇಳಿಲ್ಲ. ಅದರ ಬಗ್ಗೆ ಚರ್ಚೆ ಕೂಡ ಬೇಕಿಲ್ಲ ಎಂದ್ರು.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಆಡಿಯೋ ವಿಚಾರದಲ್ಲಿ ಗಿಮಿಕ್ ಮಾಡಲಾಗಿದೆ. ನಾಯಕತ್ವ ಬದಲಾವಣೆ ಪ್ರಶ್ನೆ ಉದ್ಭವವಾಗಿಲ್ಲ. ಆಡಿಯೋ ವೈರಲ್ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಅವರ ಕುತಂತ್ರ ನಡೆಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.