ಬೆಂಗಳೂರು: "ಬಿಜೆಪಿಯಲ್ಲಿ ಈಗ ಚಾಪ್ಟರ್ 2 ಆರಂಭವಾಗಿದೆ. ಆರ್ ಅಶೋಕ್ಗೆ ವಿಪಕ್ಷ ನಾಯಕನ ಸ್ಥಾನ ಕೊಟ್ಟು ಉರಿಯೋ ಬೆಂಕಿಗೆ ತುಪ್ಪ ಹಾಕಿದ್ದಾರೆ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಆರ್.ಅಶೋಕ್ ಹಾಗೂ ವಿಜಯೇಂದ್ರಗೆ ಅಭಿನಂದನೆ ಸಲ್ಲಿಸುತ್ತೇನೆ. 6 ತಿಂಗಳ ನಂತರ ಪ್ರಜಾಪ್ರಭುತ್ವಕ್ಕೆ ಗೌರವ ತಂದಿದ್ದೀರಿ. ನಾವು ಯಾವ ವಿಚಾರದಲ್ಲೂ ಜಾರಿಕೊಳ್ತಿಲ್ಲ, ವಿರೋಧ ಪಕ್ಷದ ನಾಯಕರಾಗಿ ಬನ್ನಿ. ಬರ ಸೇರಿದಂತೆ ಎಲ್ಲಾ ವಿಚಾರ ಚರ್ಚೆ ಮಾಡೋಣ. ನಮಗೆ ವಿಪಕ್ಷ ನಾಯಕನ ಆಯ್ಕೆ ಮಾಡಿದರು ಎಂಬ ಖುಷಿ ಇದೆ. ಆದರೆ ಬಿಜೆಪಿಯವರಿಗೆ ಇದು ಸಂತೋಷವಾಗಿಲ್ವಲ್ಲಾ. ಈ ಹಿಂದೆ ಚುನಾವಣೆ ವೇಳೆ ಬಿ.ಎಲ್.ಸಂತೋಷ್ ಮಾಡಿದ್ದು ಚಾಪ್ಟರ್ 1. ಈಗ ಇದು ಚಾಪ್ಟರ್ 2" ಎಂದು ಕುಟುಕಿದರು.
"ಗೋ ಬ್ಯಾಕ್ ಅಶೋಕ್ ಅಂತಾ ಪೋಸ್ಟರ್ ಹಾಕಿದ್ರು ಆಶ್ಚರ್ಯವಿಲ್ಲ. ಚೇಲಾ ಮಾತು ಕೇಳಿ ನಾಮಿನೇಟ್ ಮಾಡಿದ್ದಾರೆ ಅಂತಾ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬಿಜೆಪಿ ಒಂದು ಕುಟುಂಬದ ಪಕ್ಷ ಆಗುವುದಕ್ಕೆ ಒಪ್ಪಲ್ಲ ಅಂತ ಯಾರು ಹೇಳಿದ್ದು. ಯಾರ ಬಣ್ಣ ಬಯಲು ಮಾಡಿರೋದು ಅವರು. ಚಿಂದಿ ಚೋರ್ಗಳಿಗೆ ರಾಜಾಹುಲಿ, ಬೆಟ್ಟದ ಹುಲಿ ಮಾಡಬೇಡಿ ಅಂತಾ ಹೇಳಿದ್ದು ಯಾರು?. ಒಬ್ಬ ಶಾಸಕರು ಅವರ ಪಕ್ಷದ ಅಧ್ಯಕ್ಷ, ವಿಪಕ್ಷ ನಾಯಕರ ಬಗ್ಗೆ ಮಾತನಾಡಿದ್ದಾರೆ. ಒಬ್ಬ ಏಜೆಂಟ್ ಬಂದಿದ್ದ ಪರ್ಚೇಸ್ ಮಾಡೋದಕ್ಕೆ ಅಂತ ಯತ್ನಾಳ್ ಹೇಳ್ತಾರೆ. ಅವರು ಸ್ವಂತ ಪಕ್ಷದವರೇ ಹೇಳ್ತಿದ್ದಾರೆ. ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಅವರ ಚೇರಿಗೆ ಎಷ್ಟು ಕೊಟ್ರು. ಇದು ನಾನು ಹೇಳ್ತಿಲ್ಲಾ ಅವರ ಪಕ್ಷದ ನಾಯಕರೇ ಹೇಳ್ತಿದ್ದಾರೆ" ಎಂದು ಟೀಕಿಸಿದರು.
"ಚೈತ್ರಾ ಪ್ರಕರಣದಲ್ಲಿ ಟಿಕೆಟ್ ಸೇಲ್ ಆಗಿದೆ ಅಂತಾ ಹೇಳಿದ್ದಾರೆ. ಯಾರಿಗೆ ದುಡ್ಡು ಹೋಗಿದೆ ಅಮಿತ್ ಶಾಗೆ ಹೋಯ್ತಾ?. ಬಿಎಲ್ ಸಂತೋಷ್ಗೆ ಹೋಯ್ತಾ. ಯಡಿಯೂರಪ್ಪ ಯಾಕೆ ಕಣ್ಣೀರು ಹಾಕಿದ್ರು ಅಂತ ಸ್ಪಷ್ಟನೆ ನೀಡಲಿ. ಬಿಜೆಪಿ ಶಾಸಕರು ಕೇಳಿದ್ದಕ್ಕೆ ಉತ್ತರ ಕೊಡಲಿ, ಕಾಂಗ್ರೆಸ್ ನವರಿಗೆ ಉತ್ತರ ಕೊಡುವುದು ಬೇಡ. ಬಿಜೆಪಿ ಕಾರ್ಯಕರ್ತರಿಗೆ ಉತ್ತರ ನೀಡಲಿ. ಬಿಜೆಪಿಯಲ್ಲಿ ಬೆಳೆಯಬೇಕು, ವಿಪಕ್ಷ ನಾಯಕರಾಗಿಯೇ ಉಳಿಯಬೇಕು ಎಂಬುದು ನಮ್ಮ ಆಸೆ. ಯಡಿಯೂರಪ್ಪ ಅವರ ಮೇಲುಗೈ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಹಾಗಾದ್ರೆ ಬಿ.ಎಲ್ ಸಂತೋಷ ಅವರು ಏನು ಮಾಡಬೇಕು. ಎಲ್ಲದಕ್ಕೂ ಉತ್ತರ ಕೇಶವಕೃಪ, ಬಿಜೆಪಿ ಕಚೇರಿಯಲ್ಲಿದೆ" ಎಂದು ತಿಳಿಸಿದರು.
ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ: ಯತೀಂದ್ರ ಆಡಿಯೋದಲ್ಲಿ ವಿವೇಕಾನಂದ ಹೆಸರು ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿ, "ವಿವೇಕಾನಂದ ಅನ್ನೋದು ಕಾಮನ್ ನೇಮ್. ಜೆಡಿಎಸ್ ನವರು ಹೇಳುವ ಹೆಸರು ಬಿಇಒ ಅನ್ನೋದನ್ನು ಈಗಾಗಲೇ ಹೇಳಲಾಗಿದೆ. ಜೆಡಿಎಸ್ ನವರ ಎಷ್ಟು ಲೆಟರ್ ನಮ್ಮ ಹತ್ತಿರ ಇದೆ ಎಂಬುದನ್ನು ತೋರಿಸುತ್ತೇನೆ. ಹಾಗಾದ್ರೆ ಇದೆಲ್ಲಾ ದಂಧೆನಾ?. ವಿವೇಕಾನಂದ ಪೊಲೀಸ್ ಇನ್ಸ್ಪೆಕ್ಟರ್ ಅಂತಾರೆ. ಸ್ಥಳೀಯರು ಬಿಇಒ ಅಂತಾರೆ. ಹೆಸರು ಪ್ರಸ್ತಾಪ ಮಾಡಿರೋದ್ರಲ್ಲಿ ತಪ್ಪೇನಿದೆ. ಆಡಿಯೋ ತಿರುಚಿ ಮುರುಚಿ ಹಾಕಿದ್ರೆ ಏನು ಪ್ರಯೋಜನ" ಎಂದರು.
ಇದನ್ನೂ ಓದಿ: ಆರ್ ಅಶೋಕ್ ವಿಪಕ್ಷ ನಾಯಕನಾಗಿರುವುದು ನನಗೆ ಬಹಳ ಸಂತೋಷ ತಂದಿದೆ: ಡಿ ಕೆ ಶಿವಕುಮಾರ್